ತಣ್ಣನೆಯ ಗಾಳಿ ಬೀಸುತಿರಲು ಸರೋವರದ ದಡದಲ್ಲಿ ಕುಳಿತಿದ್ದ ನನ್ನ ಯೋಚನಾಲಹರಿ ಹದಿಮೂರು ವರ್ಷ ಹಿಂದಕ್ಕೆ ನನ್ನನ್ನು ಕೊಂಡೊಯಿತು.
ಇನ್ನೇನು ಸೋಲುತಿದ್ದೇನೆ ಎಂದು ಗೊತ್ತಿದ್ದರೂ ಮನಸ್ಸಿನಲ್ಲಿ ಮಾತ್ರ ಪವಾಡ ಸಂಭವಿಸುತ್ತದೆ ಗೆಲುವು
ನನ್ನದೇ ಎಂಬ ನಂಬಿಕೆ ಇರುವವನು ನಾನು. ಹೌದು….. ಪ್ರೀತಿ ಕೈ ಕೊಟ್ಟಿತು. ಬದುಕೇ ಬೇಡವೆನ್ನಿಸಿತು.
ಅಭಿಮಾನ ಕೈ ಬಿಡಲಿಲ್ಲ. ಬದುಕುವುದು ಅನಿವಾರ್ಯವಾಗಿತ್ತು. ಇಷ್ಟಪಟ್ಟು ಎಂ.ಬಿ.ಎ. ಪದವಿ ಪಡೆಯ ಬೇಕೆಂದು
ಕೊಂಡರೂ ಹಣವೆಲ್ಲಿದೆ..? ಅರ್ಜಿ ಫಾರಂಗೆ ಹೇಗೋ ಮುನ್ನೂರು ರೂಪಾಯಿ ಪಕ್ಕದ ಮನೆಯ ಚಂದ್ರನಲ್ಲಿ ಪಡೆದುಕೊಂಡೆ.
ಮುಂದಕ್ಕೆ…? ಓಹ್… ಸಾಧ್ಯನೇ ಇಲ್ಲ ಅನ್ನಿಸಿತು. ಅದುವರೆಗೂ ಬ್ಯಾಂಕಿನಲ್ಲಿ ಖಾತೆಯನ್ನೇ ತೆರೆಯದ ನಾನು
ಬ್ಯಾಂಕಿನ ಮ್ಯಾನೆಜರನ್ನು ಒಪ್ಪಿಸಿ ಸಾಲ ಪಡೆದು ಹೇಗೂ ನಾನು ಬಯಸಿದ ಸ್ನಾತಕೊತ್ತರ ಪದವಿ ಪಡೆದೆನೆಂದರೆ
ವಿಚಿತ್ರವಾದರೂ ನಿಜ. ನಿಜವಾಗಿ ಕಷ್ಟ ಅನಿಸಿದ್ದು ಆ ನಂತರನೇ. ದೂರವಾಣಿ ಕರೆ ಮಾಡಲು ಪಕ್ಕದ ಮನೆಯನ್ನು
ಅವಲಂಬಿಸುತಿದ್ದ ನಾನು ಕೆಲಸಕ್ಕಾಗಿ ಅರ್ಜಿ ಗುಜರಾಯೀಸಿ ಸಂದರ್ಶನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತಿದ್ದ
ನನಗೆ ಪಕ್ಕದ ಮನೆಯ ಲ್ಯಾಂಡ್ ಲೈನಿಗೆ ಬರುತಿದ್ದ ಪೋನ್ ಕರೆ ಸಂದರ್ಶನ ಮುಗಿದ ನಂತರ ನನಗೆ ಮುಟ್ಟುತಿತ್ತು...
ಇಷ್ಟಕ್ಕೂ ಆ ದಿನಗಳಲ್ಲಿ ಕಂಪ್ಯೂಟರಿನಲ್ಲಿ ಬಯೋಡೇಟ
ತಯಾರಿಸಲು ಸೈಬರ್ ಕೆಫೆಗೆ ಹಣ ಕೊಡಲೂ ಕಷ್ಟವಾಗಿತ್ತು ಎಂದರೆ ಆಶ್ಚರ್ಯವಾಗುತ್ತದೆ. ಸಂದರ್ಶನ ಎದುರಿಸುದಿದ್ದಾಗ
ನನಗೆ ಅರ್ಹತೆನೇ ಇಲ್ಲ ಎಂಬಂತೆ ಸಂದರ್ಶನಕಾರರು ನನ್ನನ್ನು ನೋಡುತಿದ್ದರೋ ಎನೋ ಎಂದು ಅನಿಸುತಿತ್ತು.
ಕೊನೆಗೂ… ಎರಡುವರೆ ಸಾವಿರ ಸಂಬಳದಲ್ಲಿ ನನ್ನ ಮೊದಲ ವ್ರತ್ತಿ ಜೀವನ ಫ್ರಾರಂಬಿಸಿದೆ….!
ಈಗ ಅಂದರೆ ಹದಿಮೂರು ವರ್ಷಗಳ ನಂತರ ನನ್ನ ಸುಂದರವಾದ, ಅಭಿಮಾನದ
ಬ್ಲಾಗ್ ಒಂದನ್ನು ತಯರಿಸಬೇಕೆಂಬ ಯೋಚನೆ ಗರಿಗೆದರಿದಾಗ, ಯೂ ಟ್ಯೂಬಲ್ಲಿ ಬ್ಲಾಗ್ ಕ್ರಿಯೆಟಿಂಗ್ ವೀಡಿಯೋ
ಟ್ಯುಟೊರಿಯಲನ್ನು ಅವಲಂಬಿಸಿ ಶುರು ಹಚ್ಚಿಕೊಂಡೆನಾದರೂ, ಯಾರದೇ ಸಹಾಯವಿಲ್ಲದೆ ಸುಂದರವಾಗಿ ಚಿತ್ರಿಸುವುದು
ಕಷ್ಟವೆನಿಸಿತು. ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಯಾವುದೇ ಪರಿವೆಯೇ ಇಲ್ಲದೆ ಗೆಳೆಯ
ರಶೀಧ್ ಜೊತೆಗೂಡಿ ಕೊನೆಗೂ ಬ್ಲಾಗ್ ಚಿತ್ರಿಸುದರಲ್ಲಿ ಯಶ… ಖುಶಿ.
ಮುಗುಳ್ನಗುತಿದ್ದ ಸರೋವರದ ಸೂರ್ಯಬಿಂಬ ಮೌನವಾಗಿದೆ. ಬರೆಯುದನ್ನೇ ಮರೆತಿರುವ ನನ್ನ
ಪೆನ್ನು ಮತ್ತೆ ಬರೆಯಲು ಹಂಬಳಿಸುತಿದೆ. ಇನ್ನು ಮುಂದೆ ನನ್ನೊಳಗಿನ ಸಾವಿರ ಪ್ರಶ್ನೆಗಳಿಗೆ ಉತ್ತರ
ಹುಡುಕುತ್ತಾ…. ಹಳೆಯ ನೆನಪುಗಳಲ್ಲಿ
ತೇಲಿ ಹೋಗುತ್ತಾ… ಬದುಕು, ಬರಹ ಸಾಗುತ ದೂರಾ…. ದೂರಾ….