ಗುರುವಾರ, ಆಗಸ್ಟ್ 1, 2013

ಸ್ನಿಗ್ಧ ಸೌಂದರ್ಯ


  ಹೊರಗೆ ಕುಳಿತು ಲ್ಯಾಪ್ ಟಾಪ್ನ ಕೀಲಿ ಮಣೆಯ ಮೇಲೆ ಕೈ ಇಟ್ಟು ಏನನ್ನೋ ಯೋಚಿಸುತ್ತಿದ್ದೆ. ಒಳಗೆ ಮಗು ಅಳುತ್ತಿರುವ ಧ್ವನಿ ಕೇಳಿ ಒಮ್ಮೆಲೆ ವಾಸ್ತವಕ್ಕೆ ಬಂದೆ. ಹೊರಗೆ ಕುಳಿತು ಏನೋ ಮಾಡ್ತಿದ್ದೀಯ..? ಸ್ವಲ್ಪ ಮಗುವಿನೊಂದಿಗೆ ಇರ್ಲಿಕ್ಕಾಗೊಲ್ವ..?
ಅಮ್ಮ ನನ್ನನ್ನು ಗದರಿದ ಧ್ವನಿ. ಒಳಗೆ ಮಗಳು ಸಾಹಿತ್ಯ ಸೋಫದ ಮೇಲಿಂದ ಬಿದ್ದು ಗಾಯ ಮಾಡಿಕೊಂಡ್ಡಿದ್ದಳು. ಮಗಳನ್ನು ಸಮಧಾನಪಡಿಸುತ್ತಾ ಕುಳಿತ್ತಿದ್ದವನಿಗೆ ಟಿ.ವಿ. ಯಲ್ಲಿ ಸೊಸೆ ಎಂಬ ಹೆಸರಿನಲ್ಲಿ ಧಾರವಾಹಿ ಇನ್ನೇನೋ ಶುರುವಾಗುವುದರಲ್ಲಿತ್ತು ಚಾನಲ್ ಬದಲಾಯಿಸಲು ರಿಮೋಟ್ ಎತ್ತಿಕೊಳ್ಳುತ್ತಿರುವಾಗಲೇ ಸೌಂದರ್ಯ ಕ್ರಿಯೇಷನ್ಸ್ ಎಂಬ ಶಿರ್ಷಿಕೆಯೊಂದಿಗೆ ಸೌಂದರ್ಯರ ಭಾವಚಿತ್ರ ಮೂಡಿತು. ಒಂದು ಕ್ಷಣ ಅಲ್ಲೇ ನಿಂತು  ಬಿಟ್ಟೆ. ಸೌಂದರ್ಯ ನೆನಪಿಗಾಗಿ  ಅವರ ಪತಿ ರಘು ನಿರ್ಮಾಣದ  ಧಾರವಾಹಿ  ಅದು..!




                     ಹೌದು ನಾನು ನಟಿ ಸೌಂದರ್ಯರ ದೊಡ್ಡ ಅಭಿಮಾನಿ. ಅಂದು ಏಪ್ರಿಲ್ ೧೭ ೨೦೦೪ರಲ್ಲಿ ನಮ್ಮ ಅಡಿಟ್ ಟೀಮು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಅಡಿಟ್ ಮಾಡುತ್ತಿತ್ತು . ಅಲ್ಲಿಯ ಲೆಕ್ಕಿಗರೊಬ್ಬರು ಕೊಟ್ಟ ಚಾಕಲೇಟನ್ನು ಬಾಯಲ್ಲಿ ಹಾಕಿ ಸವಿಯನ್ನು ಅನುಭವಿಸುತ್ತಾ ನಾನೂ ಅಡಿಟ್ ಮಾಡುತ್ತಿದ್ದೆ . ಯಾರೋ ಒಬ್ಬರು ಸೌಂದರ್ಯ ವಿಮಾನ ಅಪಘಾತದಲ್ಲಿ ತೀರಿಕೊಂಡರು ಎಂದು ಹೇಳಿದರು. ಸಮುದ್ರದ ತೆರೆಗಳು ಒಮ್ಮೆಲೇ ನನ್ನನ್ನು ಕೊಚ್ಚಿ ಕೊಂಡೋದಾಗಾಯಿತು. ಬಾಯಲ್ಲಿ ಹಾಕಿದ ಚಾಕಲೇಟ್ ಗಂಟಲಲ್ಲೇಸಿಕ್ಕಿಕೊಂಡಿತು. ತುಂಬಾ ಹೊತ್ತು ಮೌನವಾದೆ. ಕೆಲಸ ಮಾಡಲು ಮನಸ್ಸಾಗಲಿಲ್ಲ. ಬಾಸ್ ಗೆ ಏನೋ ಸಬೂಬು ಹೇಳಿ ಸೀದಾ ಮನೆ ಕಡೆಗೆ  ಪ್ರಯಾಣ ಬೆಳೆಸಿದೆ.  



         ಮನೆಯ ಗೋಡೆಯಲ್ಲಿ ನಾನು ಖರೀದಿಸಿದ ದೊಡ್ಡ ಗಾತ್ರದ ಸೌಂದರ್ಯರ ಭಾವಚಿತ್ರ ಏಕೋ ಮಂಕಾಗಿತ್ತು. ಮನೆಗೆ ಬಂದ ಅತಿಥಿಗಳಿಗೆ ನಾನು ಸೌಂದರ್ಯ ಅಭಿಮಾನಿ ಎಂದು ಭಾವಚಿತ್ರ ತೋರಿಸುವುದೇ ಒಂದು ಖುಷಿ. ಬಹಳ ಸಲ ನನ್ನ ಇಷ್ಟಪಟ್ಟ  ಹುಡುಗಿಗೆ ಸೌಂದರ್ಯರನ್ನು ರೂಪಕ ಎಂಬಂತೆ ಹೋಲಿಸುತ್ತಿದ್ದೆ. ಸೌಂದರ್ಯರ ಹುಣ್ಣಿಮೆ ಚಂದ್ರನಂತಹ ಮುಖ, ಮುಗ್ಧ ನಗು, ಗಿಣಿಯಂತಹ ಮಾತುಗಳು, ಬೆಣ್ಣೆ ಮುದ್ದೆಯಂತಹ ಮನಸ್ಸು. ನನಗೆ ತುಂಬ ಇಷ್ಟವಾಗಿತ್ತು. ಸೌಂದರ್ಯ ಮಿತ ಬಾಷಿ.ಸೌಂದರ್ಯರಿಗೆ ಅಹಂ ಇರಲಿಲ್ಲ. ಬಣ್ಣಗಳಿಂದ ಚಿತ್ರ ಬಿಡಿಸುವುದೆಂದರೆ, ರಂಗೋಲಿ ಚಿತ್ರಿಸುವುದೆಂದರೆ, ರಂಗೋಲಿ ಸ್ಪರ್ದೆ ಏರ್ಪಡಿಸಿ ಅದರಲ್ಲಿ ಭಾಗವಹಿಸುವುದೆಂದರೆ ತುಂಬಾ ಇಷ್ಟ. ಸ್ಪರ್ಧೆಗಳಲ್ಲಿ ಎಂದಿಗೂ ತಾವೇ  ಗೆಲ್ಲಬೇಕೆಂದುಕೊಂಡವರಲ್ಲ. ಇನ್ನೊಬ್ಬರ ಯಶಸ್ಸಿನಲ್ಲಿ ತಮ್ಮ ಗೆಲುವನ್ನು ಕಂಡು ಕೊಂಡವರು. ಇದೇ ಅವರನ್ನು ಮುಂದೆ ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ಯಿತು.
       ಸೌಂದರ್ಯ ಡಾಕ್ಟರ್  ಆಗಬೇಕೆಂದು ಕನಸು ಕಂಡವರು. ತಮ್ಮ ಬಾಲ್ಯದ ದಿನಗಳಲ್ಲಿ ಡಾಕ್ಟರ್ ತರಹ  ಡ್ರೆಸ್ ಮಾಡಿ ನಟಿಸುತ್ತಿದ್ದರು.  ತಮ್ಮ ಎಮ್.ಬಿ.ಬಿ.ಎಸ್. ಪದವಿಯನ್ನು ಪಡೆಯ ಬೇಕೆಂದುಕೊಂಡಿದ್ದ ಅವರು ಓದನ್ನು  ಅರ್ಧಕ್ಕೆ ಮೊಟಕುಗೊಳಿಸಿ ಆಕಸ್ಮಿಕವಾಗಿ ಸಿನೆಮ ರಂಗಕ್ಕೆ ಕಾಲಿಟ್ಟರು. ಪಂಚ ಭಾಷ ತಾರೆಯಾಗಿದ್ದ ಅವರು ತಮ್ಮ ಸಿನಮ ಜೀವನದ ನೂರಕ್ಕೂ ಅಧಿಕ  ಚಿತ್ರಗಳಲ್ಲಿ ಬಹು ಪಾಲು ತೆಲುಗು ಸಿನೆಮಾಗಳಲ್ಲಿ ನಟಿಸಿದ್ದರು. ಆದುದರಿಂದಲೇ ಆಂಧ್ರದಲ್ಲಿ ಮನೆ, ಮನ ಮಾನಸವಾಗಿದ್ದರು.
             
  ಕಲೆಯೇ ಜೀವನ ಎಂದು ಕೊಂಡ್ಡಿದ್ದವರು ಸೌಂದರ್ಯ. ‘ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ’ ಎಂದು ಎಲ್ಲೋ ಓದಿದ ನೆನಪು ಅದು ಸೌಂದರ್ಯ ಪಾಲಿಗೆ ನಿಜವಾಗಿತ್ತು.ಕ್ಲಿಷ್ಟಕರವಾದ ಪಾತ್ರವನ್ನು ಅಷ್ಟೇ ಅಮೋಘವಾಗಿ ನಿರ್ವಹಿಸುತ್ತಿದ್ದರು.'ಆಪ್ತಮಿತ್ರ' ಸಿನೆಮದ ನಾಗವಲ್ಲಿಯ ಪಾತ್ರವಂತು ಜನರ ಮನಸ್ಸಿನಲ್ಲಿ ಅಚ್ಛಲಿಯದೆ ಉಳಿದಿದೆ.  ಕ್ರಿಯೇಟಿವ್ ನಿರ್ದೇಶನದ ಬಗ್ಗೆ ಆಸಕ್ತಿ ಹೊಂದಿದ್ದರು. ಸೌಂದರ್ಯ ಬೆಂಗಳೂರಿಗೆ ಬರುತ್ತಿದ್ದಾಗ ತೆಲುಗಿನಲ್ಲಿ ತಾನು ನಟಿಸಿದ್ದ ಚಿತ್ರವನ್ನು ತನ್ನ ಕಾಲೇಜು ಸ್ನೇಹಿತರ ಜೊತೆ ವೀಕ್ಷಿಸುತ್ತಿದ್ದರು. ಆಗ ಅವರಿಗೆ ಸ್ನೇಹಿತರು ಮಾಡುತ್ತಿದ್ದ ಕಾಮೆಂಟ್ಸ್ ತುಂಬಾ ಸಂತೋಷವನ್ನುಂಟು ಮಾಡುತಿತ್ತು. ಜನನಿಬಿಡ ಪ್ರದೇಶಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸುತ್ತುವುದೆಂದರೆ ಎಲ್ಲಿಲ್ಲದ ಖುಷಿ.
   ಯಾವಾಗಳೂ ಶೂಟಿಂಗ್ ನಲ್ಲಿ ಬ್ಯುಸಿಯಾಗುರುತ್ತಿದ್ದ ಸೌಂದರ್ಯ ಒಂದು ದಿನ ತನ್ನ ಡೈರೆಕ್ಟರಲ್ಲಿ ರಿಕ್ವೆಸ್ಟ್ ಮಾಡಿ ತನ್ನ ಪತಿ ಕೆಲಸ ಮಾಡುತ್ತಿದ್ದ ಕಂಪೆನಿಯ ಹೊರಗೆ ನಿಂತು ಪತಿಗೆ ಕರೆ ಮಾಡಿದ್ದಾರೆ.ಸೂರ್ಯ ತನ್ನ ಹಗಲಿನ ಆಟವನ್ನು ಮುಗಿಸಿದ್ದ.  ಚಂದ್ರ ಮುಗುಳ್ ನಗು ಬೀರುತ್ತಾ ಇನ್ನೇನು ಆಟ ಆರಂಬಿಸಿದ್ದ. ಮಹಡಿಯ ಮೇಲೆ ಕೆಲಸದಲ್ಲಿ ಬ್ಯುಸಿಯಾಗಿದ್ದ ರಘುರನ್ನು  ಕಿಟಕಿಯ ಬಳಿ ಬರ ಹೇಳಿದ್ದಾರೆ. ಸೌಂದರ್ಯ ತಮಾಷೆ ಮಾಡುತಿದ್ದಾರೇನೋ ಎಂದು ಕೊಂಡ ರಘು ಕೋಪಗೊಂಡರೂ ತೋರ್ಪಡಿಸದೆ ಕಿಟಕಿಯ ಬಳಿ ಬಂದಿದ್ದಾರೆ. ಏನ್ ಆಶ್ಚರ್ಯ…! ನೋಡಿದರೆ ಸೌಂದರ್ಯ..!! ಹುಟ್ಟು ಹಬ್ಬದ ಶುಭಾಶಯ ಹೇಳುವಾಗ ಖುಷಿ ಪಡುವ ಸರದಿ ರಘುವವರದಾಗಿತ್ತು. ಸೌಂದರ್ಯ ಶೂಟಿಂಗ್  ಸಮಯದಲ್ಲಿ ಕಲಾವಿದೆಯಾಗಿದ್ದರೆ , ಮನೆಯಲ್ಲಿ ಪಕ್ಕಾ ಗ್ರಹಿಣಿಯಾಗಿದ್ದರು.
                               

  ಆ ದಿನ ನಾನು ಸೌಂದರ್ಯರನ್ನು ಭೇಟಿಯಾದೆ. ಎಷ್ಟು ಖುಷಿ ಪಟ್ಟೆನೆಂದರೆ, ಅದನ್ನು ವರ್ಣಿಸಲಸಾಧ್ಯವಾಗಿತ್ತು. ಅವರು ನನ್ನಲ್ಲಿ ಸಂತೋಷದಿಂದ ಮಾತಾಡಿಸುತ್ತಿದ್ದರು. ಅವರ ಒಟ್ಟಿಗೆ ನಿಂತು ಫೊಟೊ ತೆಗಿಸಿಯೂ ಆಯಿತು. ಅವರು ಶೂಟಿಂಗಲ್ಲಿ ಬ್ಯುಸಿಯಾಗಿದ್ದರಿಂದ ಬಹಳ ಹೊತ್ತು ನಾನು ಅಲ್ಲೇ  ಇದ್ದೆ. ಬೆಕ್ಕುಗಳು ಜಗಳವಾಡುವ ಕರ್ಕಶ ಧ್ವನಿ.....! ಒಮ್ಮೇಲೆ ಬೆಚ್ಚಿ ಬಿದ್ದು ಎಚ್ಚರಗೊಂಡೆ. ಮಲಗಿದ್ದಲ್ಲಿಂದಲೇ ಗಡಿಯಾರ ನೋಡಿದೆ. ರಾತ್ರಿ ಎರಡು ಗಂಟೆಯಾಗಿತ್ತು.  ನಾನು ಕಂಡದ್ದು ಕನಸಾಗಿತ್ತು.  ತುಂಬಾ  ನಿರಾಶನಾಗಿದ್ದೆ.  
    ಸೌಂದರ್ಯ ತಮ್ಮ ಹುಟ್ಟೂರು ಕೋಲಾರದ ಕುಲಗುಂಟೆಯಲ್ಲಿ ಮದುವೆಯಾಗುವ ಬಡ ಹೆಣ್ಣು ಮಕ್ಕಳಿಗೆ ಹಣದ ಸಹಾಯ ಮಾಡುತ್ತಿದ್ದರು. ದೇಶದ ಜನರಿಗೆ ಯಾವುದಾದರೂ ರೀತಿಯಿಂದ ಸಹಾಯ ಮಾಡಬೇಕೆಂದುಕೊಂಡಿದ್ದರು. ಆದರೆ ಎಲ್ಲರಿಂದ ಬಹು ಬೇಗ ಮರೆಯಾಗಿ ಬಿಟ್ಟರು.ತಮ್ಮ ೨೬ನೆಯ ವಯಸ್ಸಿನಲ್ಲಿಯೇ ಉಯಿಲ್ ಒಂದನ್ನು ಬರೆದಿಟ್ಟ ಸೌಂದರ್ಯ ತಮ್ಮ ಮರಣ ನಂತರ ತಮ್ಮ ಸಂಸಾರದ ಎಲ್ಲರೂ ಸುಖ ಸಂತೋಷದಿಂದ ಬದುಕಬೇಕೆಂದು ಕೊಂಡಿದ್ದರು. ಆದರೆ ಇತ್ತೀಚೆಗೆ ಸೌಂದರ್ಯ ಕುಟುಂಬ ಆಸ್ತಿಗಾಗಿ ಮಾಡಿದ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ಸೌಂದರ್ಯ ಆತ್ಮ ಎಷ್ಟು ನೊಂದು ಕೂಂಡಿರಬಹುದಲ್ವ…..?        


  

1 ಕಾಮೆಂಟ್‌: