ಮಂಗಳವಾರ, ಆಗಸ್ಟ್ 27, 2013

ಬೆಳಕ ಹೆಜ್ಜೆಯನರಸಿ........

               
     ನಾನು ಬಿಡಿಸಿದ ಚಿತ್ರವನ್ನು  ಸ್ವಲ್ಪ ದೂರ ಹೋಗಿ ನೋಡಿದೆ. ಗೋಡೆಯ ಮೇಲೆ ನೇತಾಡಿಸಿ ಕುರ್ಚಿಯ ಮೇಲೆ ನಿಂತು ದೇಹವನ್ನು ಆಚೆ ಈಚೆ ಬಗ್ಗಿಸಿ ಕಲಾಕ್ರತಿಯ ಸೌಂದರ್ಯವನ್ನು ಸವಿದೆ. ವಾಹ್ . .. ಸುಂದರವಾಗಿದೆ. ಇದು ನಾನು ಬರೆದ ಕವನಕ್ಕೆ ಪೂರಕವಾಗಿದೆ. ಚಿತ್ರ ನೋಡಿದವರು ಕವನ ಓದಿಯೇ ಓದುತ್ತಾರೆ. ಕವನ ಓದಿದವರು ಮತ್ತೊಮ್ಮೆ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಾರೆ. ನನಗೆ ಕವನ ಏನೋ ಬರೆಯಬಹುದು ಆದರೆ ನಾನು ಚಿತ್ರಕಲಾವಿದನಲ್ಲ.ಶಾಲಾದಿನಗಳಲ್ಲಿ   ಬಣ್ಣಗಳಿಂದ ಚಿತ್ರ ಬರೆದು ಎಲ್ಲರಿಂದ ಪ್ರಶಂಸೆ ಪಡೆಯುತ್ತಿದ್ದೆ. ಆದರೆ ಈ ಕಲಾ ಸಮುದ್ರಕ್ಕೆ ಧುಮುಕಿ ಉತ್ತಮ ಜೀವನ ನಡೆಸಬಹುದು, ಉನ್ನತ ಸ್ಥಾನ ಪಡೆಯಬಹುದು ಎಂದು ಆ ಸಮಯದಲ್ಲಿ ನನಗೆ ಗೊತ್ತಿರಲಿಲ್ಲ. ಆದುದರಿಂದ ಆ ದಾರಿಯಲ್ಲಿ ಹೋಗಲಾಗಲಿಲ್ಲ .

  ಓಹ್... ಮೊಬೈಲ್ ರಿಂಗಣಿಸುತ್ತಿದೆ. 'ರೆನ್ನಿ'ಯದ್ದೇ ಫೋನ್ ಆಗಿರಬೇಕು. ನಮ್ಮ ಪ್ಲಾನ್ ಪ್ರಕಾರ ಇಂದು ನಮ್ಮ ಪಯಣ ಕಾವೇರಿಯು ರಭಸದಿಂದ ಧುಮುಕಿ ಹರಿಯುವ ತಾಣಗಳೆ ಗಗನ ಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು. ಇದು ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪದ ಶಿವನಸಮುದ್ರದ್ರಕ್ಕೆ ಹತ್ತಿರವಿದೆ. ಇಲ್ಲಿ ಕಾವೇರಿ ನದಿ ತಲಕಾವೇರಿಯಲ್ಲಿ ವೈಯಾರವಾಗಿ ಬಳಕುತ್ತಾ ಹರಿದು ಪ್ರಕ್ರತಿಯೊಂದಿಗೆ ಬೆರೆತು ತನ್ನ ಚೆಲುವಿನಿಂದ ಪ್ರಕ್ರತಿಯ ಅಂದ ಹೆಚ್ಚಿಸಿ ಕರ್ನಾಟಕದ ಕೆಲವೆಡೆ ಸುಂದರ ತಾಣಗಳನ್ನು ಸ್ರಷ್ಟಿಸಿ ಕರ್ನಾಟಕದ ಸೌಂದರ್ಯವನ್ನು ಹೆಚ್ಚಿಸಿದ್ದಾಳೆ.

    ಮೊಬೈಲ್ ಕೈಗೆತ್ತಿಕೊಂಡು ಹಲೋ ಎಂದೆ. ಹೌದು ಆ ಕಡೆಯಿಂದ ರೆನ್ನಿ ಮಾತಾಡುತಿದ್ದ. 'ಶ್ರಿಂಗೇರಿಯಿಂದ ಹೊರಟು ಸಮಯ ಸರಿಯಾಗಿ ಹತ್ತು ಗಂಟೆಗೆ ಹಾಸನದಲ್ಲಿರುತ್ತೇನೆ' ಅಂದ. ಸಮಯ ಬೆಳಿಗ್ಗೆ ೭ ಗಂಟೆಗೆ ಇನ್ನೂ ಹದಿನೈದು ನಿಮಿಷ ಬಾಕಿ ಇತ್ತು. ಓಕೆ ರೆನ್ನಿ ಎಂದವನೆ ಕಾಲ್ ಕಟ್ ಮಾಡಿದೆ. ರೆನ್ನಿಯ ಪೂರ್ತಿ ಹೆಸರು ರೆನ್ನಿ ಅಶೋಕ್ ಕುಮಾರ್. ಬೆಂಗಳೂರಲ್ಲಿ ಬಿಸಿನೆಸ್ ಮಾಡ್ಕೊಂಡಿದ್ದಾನೆ. ತನ್ನ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾನೋ ಗೊತ್ತಿಲ್ಲ. ಆದರೆ ಗೆಳೆಯನಾಗಿ ನನ್ನ ಭವಿಷ್ಯದ ಬಗ್ಗೆ ತುಂಬಾನೇ ಆಶೆ ಇಟ್ಟುಕೊಂಡಿದ್ದಾನೆ. ನನ್ನ ಇನ್ನೊಬ್ಬ ಗೆಳೆಯ ರಶೀಧ್ ಆಗಲೇ ಫೋನ್ ಮಾಡಿ ನಾನು ರೆಡಿಯಾಗಿದ್ದೇನೆ 'ಸರ್' ಎಂದಿದ್ದ. ಅವ ನನನ್ನು ಕರೆಯುವುದೇ ಹಾಗೆ. ನಾವು ಮೂಡಬಿದ್ರೆಯಿಂದ ಹೊರಡಬೇಕಿತ್ತು. ನನ್ನ ಹೊಸ ಕಾರು 'ಇಕೋಸ್ಪೋರ್ಟ್ ಟೈಟಾನಿಯಮ್' ನ್ನು ಸ್ಟಾರ್ಟ್ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾದ ಪೋರ್ಡ್ ಕಂಪೆನಿಯ ಬ್ಲಾಕ್ ಅಂಡ್ ವೈಟ್ ಕಾರ್. ಅಕ್ಷರಶಃ ಟೈಟಾನಿಕ್ ಹಡಗು. ನನ್ನ ಹೊಸ ಕಾರಿನಲ್ಲಿ ದೂರ ಪ್ರಯಾಣ ಮಾಡಬೇಕೆಂದುಕೊಡಿದ್ದರಿಂದ ಭರದಿಂದ ಹರಿಯುವ ಭರಚುಕ್ಕಿ ಮತ್ತು ಗಗನದಿಂದ ಹರಿಯುವ ಗಗನ ಚುಕ್ಕಿ ಜಲಪಾತಗಳಿಗೆ ನನ್ನ ಗೆಳೆಯರೊಂದಿಗೆ ಪ್ರವಾಸ ಹೋಗಲು ನಿರ್ಧರಿಸಿದ್ದೆ. ಹಾಗೆ ನೋಡಿದರೆ ಶ್ರೀಮಂತರಿಗಿರುವ ಯಾವ ರೊಕ್ಕದ ಧಿಮಾಕೂ ನನ್ನಲ್ಲಿ ತಂದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ಈ ನಶ್ವರ ಬದುಕಿನಲ್ಲಿ ಯಾವುದೂ ಶಾಶ್ವತ ಅಲ್ಲ.


     ರಶೀಧ್ ಹಿಂದಿನ ಸೀಟಲ್ಲಿ ಕುಳಿತವನೇ ತನ್ನ ಸ್ಯಾಮ್ಸಂಗ್  ಮೊಬೈಲಿನಲ್ಲಿ ಏನೋ ಹುಡುಕಲು ಶುರುವಿಟ್ಟುಕೊಂಡ. ಅಯ್....  ಅಜ್ನಭಿ....   ತೂಭೀ . ..  ಕಭೀ.. ಆವಾಜ್...  ದೆ..  ಕಹಿನ್..   ಸೆ.......   ಎಂಬ ಸಂಗೀತದೊಂದಿಗೆ ನಮ್ಮ ಗಾಡಿ ಹೊರಟಿತು. ನನಗೆ ಯಾಕೋ ಖುಷಿಯ ಹಾಡುಗಳಿಗಿಂತ ಇಂತಹ ಬೇಸರದ ಹಾಡುಗಳೇ ಹೆಚ್ಚು ಇಷ್ಟ. 


   ನನ್ನ ಜೀವನ ಎಷ್ಟೊಂದು ತಿರುವು ಪಡೆದುಕೊಂಡಿತು....!! ನನ್ನಲ್ಲಿ ಏನೆಲ್ಲಾ ಬದಲಾವಣೆಗಳಾದವು...! ಕತ್ತಲೆಯಲ್ಲಿ ಬೆಳಕ ಹೆಜ್ಜೆಯನರಸಿ ಹೊರಟವನು ನಾನು ಬೆಳಕನ್ನು ಸೇರಿದ್ದೇನೆಯೇ ..? 


       ಮೊನ್ನೆ ಫೇಸ್ ಬುಕ್ ಸೈನ್ ಇನ್ ಮಾಡಿದವನೇ ಆಕಸ್ಮಿಕವಾಗಿ ನಿನ್ನ ತಂಗಿಯ ಭಾವಚಿತ್ರ ಒಂದು ಬದಿಯಲ್ಲಿ ಕಂಡೆ ಸೌಂದರ್ಯ . ಇನ್ನೇನೂ ಪೇಜ್ ರಿ ಲೋಡ್ ಆಗುವುದರಲ್ಲಿತ್ತು ಕೂಡಲೆ ನಿನ್ನ ತಂಗಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ ಅದುಮಿ ಹಿಡಿದುಕೊಂಡೆ. ಒಂದು ವೇಳೆ ಆ ಪೇಜ್ ಬದಲಾದರೆ ಪುನಹ ನಿನ್ನ ತಂಗಿಯನ್ನು ಫೇಸ್ ಬುಕ್ ನಲ್ಲಿ ಹುಡುಕುವುದು ಕಷ್ಟ. ನನಗೆ ನಿನ್ನ ತಂಗಿ ಫೇಸ್ ಬುಕ್ ನಲ್ಲಿರುವುದು ಮುಖ್ಯವಾಗಿರಲಿಲ್ಲ. ನಿನ್ನ ತಂಗಿಯ ಅಕೌಂಟ್ ನಲ್ಲಿ ನೀನಿರಬಹುದು. ಒಂದು ವೇಳೆ  ನೀನಿದ್ದರೆ ಈಗ ನೀನು ಹೇಗಿರಬಹುದು? ಎಷ್ಟೊಂದು ಬದಲಾಗಿರಬಹುದು...? ಎಂದು ಹುಡುಕುತ್ತಿರುವಾಗಳೇ... ನಿನ್ನ ತಂಗಿಯ ಫೇಸ್ ಬುಕ್ ಅಕೌಂಟ್ ನಲ್ಲಿ ನೀನಿಲ್ಲ  ಎಂದು ಗೊತ್ತಾಯಿತು. ನಿರಾಶೆಯಾಯಿತು. ಕಳೆದ ಎರಡು ವರ್ಷಗಳಿಂದ ನೀನು ಫೇಸ್ ಬುಕ್  ನಲ್ಲಾದರೂ ಸಿಗಬಹುದೇ ಎಂದು ಹುಡುಕುತಿದ್ದೆ. ಕೆಲವರು ಹೇಳುತ್ತಾರೆ, ಫೇಸ್ ಬುಕ್ ನಂತಹ ವೆಬ್ ಸೈಟುಗಳು ಪರಿಮಳವಿಲ್ಲದ ಪ್ಲಾಸ್ಟಿಕ್ ಹೂವಿನಂತೆ, ಇಲ್ಲಿ ಮನಸ್ಸಿನಲ್ಲಿ ಒಂದಿಷ್ಟು ಪ್ರತಿಷ್ಠೆ, ಪ್ರದರ್ಶನ, ಸ್ವಾರ್ಥ, ಲಾಭ-ನಷ್ಟದ ಲೆಕ್ಕಾಚಾರವೇ ಮುಖ್ಯವಾಗಿರುತ್ತದೆ ಎಂದು. ಯಾರು ಏನೇ ಹೇಳಲಿ, ಈ ಫೇಸ್ ಬುಕ್ ಹಲವಾರು ವರ್ಷಗಳ ಹಿಂದಿನ ಸ್ನೇಹಿತರನ್ನು ಹುಡುಕಿ ಕೊಟ್ಟಿದೆ. ಒಂದೇ ಅಭಿರುಚಿಯವರು ಜೊತೆಯಾಗಿ ಏನನ್ನೋ ಸಾಧಿಸಲಿಕ್ಕೆ ವೇದಿಕೆಯಾಗಿದೆ. ಈ ಫೇಸ್ ಬುಕ್ ನ ನಿನ್ನ ತಂಗಿಯ  ಅಕೌಂಟಿನಿಂದಾಗಿ ನಿನ್ನ ಪತಿಯನ್ನು ಹುಡುಕಿದೆ. ಎಲ್ಲೋ ಸ್ಟುಡಿಯೊದಲ್ಲಿ ನಿಮ್ಮಬ್ಬರ ಮದುವೆಯ ಫೋಟೋದ ಜೊತೆಗೆ ನಿನ್ನ ಪತಿಯ ಹೆಸರು ಓದಿದ ನೆನಪು, ಕೊನೆಗೂ ಹದಿಮೂರು ವರ್ಷಗಳ ನಂತರ ನಿನ್ನನ್ನು ಹುಡುಕಲು ನೆರವಾಯಿತು
ಸೌಂದರ್ಯ. ನೀನು ಇನ್ನೂ ಹಾಗೆಯೇ ಇದ್ದೀಯ ಸೌಂದರ್ಯ. ಅದೇ ದುಂಡು ಮುಖ. ನಮ್ಮ ಕಾಲೇಜಿನ ಕೆಲವರ ಮುಖ ನಮ್ಮ ಎನ್.  ಎಸ್.   ಎಸ್. ಗ್ರೂಪ್ ಫೊಟೊ ಗೆ ಹೋಲಿಸಿದಾಗ ಈಗ ಆಕಾರ ಕಳಕೊಂಡು 'ಅಮೀಬ'ದಂತಾಗಿದೆ.  ಕಂಪ್ಯೂಟರಲ್ಲಿ ನಿನ್ನ ಭಾವಚಿತ್ರ ಮೂಡುತಿದ್ದಂತೆ, ನೀನು ನನ್ನೆಡೆ ನೋಡಿ ಪರಿಚಿತ ನಗು ಬೀರಿದಂತಾಯಿತು. ನಾನೂ ನಿನ್ನ ನೋಡಿ ಮುಗುಳ್ ನಕ್ಕೆ. ಒಮ್ಮೆ ಸುತ್ತಲು ನೋಡಿ ಕೊಂಡೆ. ಬಚಾವ್ ಯಾರೂ ಇಲ್ಲ.  ನಾನು ಒಬ್ಬನೇ ನಗುವುದನ್ನು ಯಾರೂ  ನೋಡಿಲ್ಲವಲ್ಲ ಎಂದುಕೊಂಡೆ. ಎದ್ದು ನಾಲ್ಕು ಹೆಜ್ಜೆ ನಡೆದೆ. ಅಲ್ಲೇ ವ್ರತ್ತಾಕಾರವಾಗಿ ಸುತ್ತು ಬಂದೆ. ಮತ್ತೆ ಓಡಿ ಬಂದು ಕಂಪ್ಯೂಟರ್ ಮುಂದೆ ಕುಳಿತೆ. ಆ ದಿನ ಇಡೀ ಖುಷಿಯಾಗಿದ್ದೆ.  

    ಹೌದು ನಾನು ನಿನ್ನ ಅಭಿಮಾನಿಯಾಗಿಯೇ ಉಳಿದೆ.  ನೀನು ನನನ್ನು ಅನ್ಯಾಯವಾಗಿ ಕವಿ ಮಾಡಿ ಬಿಟ್ಟೆ
ಸೌಂದರ್ಯ. ನಿನಗೆ ನೆನಪಿದೆಯ..? ನಾನು ಬರೆದ ಮೊದಲ ಕವನ ನಿನ್ನ ಕೈ ಗೆ ಕೊಟ್ಟದ್ದು. ನೀನು ಅದನ್ನು ಓದಿ ಮುಸ್ಸಂಜೆಯ ಸೂರ್ಯನಂತೆ ಮುಖ ಕೆಂಪಗೆ ಮಾಡಿ ವಾಪಸ್ ನನ್ನ ಕೈ ಗೆ ಕೊಟ್ಟದ್ದು. ಬಹುಶಃ ಕಾಲೇಜಿನ ಮೂರು ವರ್ಷದಲ್ಲಿ ನಾನು ಬರೀ ನಾಲ್ಕು ಸಲ ನಿನ್ನಲ್ಲಿ  ಮಾತಾಡಿದ ಮಾತುಗಳಲ್ಲಿ  ಆ ದಿನ ನಿನ್ನಲ್ಲಿ  ಮಾತಾಡಿದ ಒಂದು ವಾಕ್ಯ ಮೊದಲ ಮಾತಾಗಿರಬಹುದು. ಆದರೆ ಗಂಟಲ ತುಂಬಾ ಆಡದೆ ಉಳಿದ ಮಾತುಗಳು ಪದಕಲಕ್ಕೆ ಬೀಳಲು ತಹತಡಿಸುತಿತ್ತು. ಎಷ್ಟೇ ರಶ್ ಇದ್ದರೂ ಕಾಲೇಜಿಗೆ ಬರುತಿದ್ದುದು ಅದೇ ಕಂದು ಬಣ್ಣದ ನಿಶ್ಮಿತಾ ಬಸ್ಸಿನಲ್ಲಿ . ಒಮ್ಮೆ ಬಸ್ಸಲ್ಲಿ ಒಂದು ಸೀಟ್ ಖಾಲಿಯದಾಗ ಒಟ್ಟೊಟ್ಟಿಗೆ ನಿಂತಿದ್ದ ನಾವಿಬ್ಬರೂ ಯಾರು ಕುಳಿತು ಕೊಳ್ಳುವುದು ಎಂಬ ಗೊಂದಲದಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡು ಹಾಗೆಯೇ ನಿಂತು ಕೊಂಡದ್ದು ಮತ್ಯಾರೋ ಕುಳಿತು ಕೊಂಡದ್ದು, ಇನ್ನೊಮ್ಮೆ ಬಸ್ಸಲ್ಲಿ ರಶ್  ಇದ್ದುದರಿಂದ ನಾನು ನೇತಾಡುತಿದ್ದಾಗ ಬಾಗಿಲ ಬಳಿ ಕುಳಿತಿದ್ದ ನೀನು ನನ್ನಲ್ಲಿದ್ದ  ಪುಸ್ತಕಗಳನ್ನು ತೆಗೆದುಕೊಳ್ಳಲು ನಾನು  ಚಾಚುತಿದ್ದಂತೆ ತೆಗೆದುಕೊಳ್ಳಲೋ ಎಂದು ಕುಳಿತಲ್ಲಿಂದಲೇ ಕೊಸರಾಡಿಕೊಕೊಳ್ಳುತ್ತಿರುವಗಲೇ ಹತ್ತಿರದಲ್ಲಿದ್ದ ಅಜ್ಜ ಕಪ್ಪೆಯನ್ನು ಹಾವು ಹಿಡಿದಂತೆ  ನನ್ನ ಪುಸ್ತಕಗಳನ್ನು ಎಳೆದು ಹಿಡಿದುಕೊಂಡದ್ದು ನನ್ನ ಮನಸ್ಸಲ್ಲಿ ಅಚ್ಚಳಿಯದಂತೆ ಅಚ್ಚೊತಿದೆ.  ಕಾಲೇಜಿನಲ್ಲಿ ಎದುರು ಬದುರಾಗಿರುವ ನಿನ್ನ ಕ್ಲಾಸಿಗೆ ಮತ್ತು ನನ್ನ ಕ್ಲಾಸಿಗೆ ಮಧ್ಯ ಇರುವ ಸುಮಾರು ಐವತ್ತು ಮೀಟರ್ ಅಂತರದ ಜಾಗ ನನಗೆ ಕ್ರಿಕೆಟ್ ಮೈದಾನದಂತೆ ಕಾಣುತಿತ್ತು. ಸುತ್ತಲಿರುವ ಕ್ಲಾಸುಗಳು ಪ್ರೇಕ್ಷಕರ  ಗ್ಯಾಲರಿಯಂತೆ ಕಾಣುತಿತ್ತು. ಬೌಂಡರಿ ಲೈನಿನಂತಿರುವ ಕ್ಲಾಸಿನ ಜಗಲಿಯಲ್ಲಿ ಅಡ್ಡಾಡುವಾಗ ನೀನು ನನ್ನೆಡೆಗೆ ಬೀರುವ ಕ್ಷಿಪ್ರ ನೋಟ ಅರಳು ಮಲ್ಲಿಗೆಯ ಮೊಗ್ಗಿನಂತೆ ಪರಿಮಳವನ್ನು ಹಬ್ಬುತ್ತಾ ನನ್ನನ್ನು ತಲುಪಿಯೇ ತಲುಪುತಿತ್ತು. ಸೌಂದರ್ಯ, ಮೊನ್ನೆ ನಮ್ಮ ಕಾಲೇಜಿಗೆ ಹೋಗುವ ಸಂದರ್ಭವೊಂದು ಒದಗಿ ಬಂತು.ನಾವು ನೀರು ಕುಡಿಯುತಿದ್ದ ಪ್ರಿಡ್ಜ್ ಇನ್ನೂ ಇದೆ ಸೌಂದರ್ಯ. ಸ್ವಲ್ಪ ಹೊತ್ತು ನಾವು ನೀರು ಕುಡಿಯುತಿದ್ದ ಪ್ರಿಡ್ಜನ್ನೇ ನೋಡುತ್ತಾ ನಿಂತೆ. ನೀನು ನಿನ್ನ ಗೆಳಿತಿಯರೊಂದಿಗೆ ನೀರು ಕುಡಿಯಲು ಬರುತಿದ್ದೆ.ನಾನೂ ಯಾವುದೇ ಅರಿವಿಲ್ಲದಂತೆ ನನಗೆ ಬಾಯಾರಿಕೆ ಆಗುತ್ತಿಲ್ಲವಾದರೂ ನಾನೂ ನೀರು ಕೂಡಿಯಲು ಬರುತ್ತಿದ್ದೆ ಗೊತ್ತಾ..? ನನಗಂತು ನೀನು ಪ್ರತಿದಿನ ಧರಿಸುತಿದ್ದ ಚೂಡಿದಾರ್ ನ ಬೇರೆ ಬೇರೆ ಬಣ್ಣಗಳಲ್ಲಿ ನಿನ್ನ ಸೌಂದರ್ಯ ಸವಿಯುದೇ ಒಂದು ಕುತೂಹಲವಾಗಿತ್ತು. ನಮ್ಮ ಮೌನಕ್ಕೆ ಮಾತಾಗುತಿದ್ದುದು ವಾರಕೊಮ್ಮೆ ನೋಟಿಸ್ ಬೋರ್ಡಿನಲ್ಲಿ  ರಾರಾಜಿಸುತಿದ್ದ ನನ್ನ ಕವನ. ನನ್ ಗೊತ್ತು ಆ ಕವನಗಳು ಒಳಗೊಳಗೆ ಸಮುದ್ರದ ದಡವ ಕೊರೆಯುವ ಅಲೆಗಳಂತೆ ನಿನ್ನ ಮನಸ್ಸನ್ನು ನಿಧಾನವಾಗಿ ಹಿಂಡಿ ಹಿಪ್ಪೆ ಮಾಡಿದಂತೆ ಭಾಸವಾಗುತಿದ್ದದಂತು ನಿಜ.ಬಹುಶಃ ಕಾಲೇಜಿನ ಕಡೇಯ ದಿನಗಳಲ್ಲಿ ನೀನು ನನ್ನ ಆಟೋಗ್ರಾಫ್ ನಲ್ಲಿ "ನಿನ್ನ ಮುಂದಿನ ಜೀವನ ಒಳ್ಳೆಯದಾಗಲಿ" ಎಂದು ಒಂದು ವಾಕ್ಯ ಗೀಚಿದ್ದರೆ, ಅದು 'ನವ್ಯಶ್ರೀ' ನಿನ್ನ ಜೊತೆ ನಿನ್ನ ಗೆಳತಿಯಾಗಿ ಇದ್ದಿದ್ದರಿಂದ ಆಗಿರಬಹುದು. ನಿನಗೆ ನೆನಪಿದೆಯ? ಸೌಂದರ್ಯ ನೀನು ಒಮ್ಮೆ ಛದ್ಮ ವೇಷ ಸ್ಪರ್ಧೆಗೆ ಅಜ್ಜಿಯ ವೇಷ ಧರಿಸಿದ್ದು, ಯಾಕೋ ನನಗೆ ಆ ದಿನ ನೀನು ಅಜ್ಜಿಯಾಗಿದ್ದನ್ನು ಕಾಣಲಾಗಲೇ ಇಲ್ಲ. ಒಮ್ಮೆ ಇಂಗ್ಲಿಷ್ ಅಧ್ಯಾಪಕರಲ್ಲಿ ಪರ್ಮಿಷನ್ ಕೇಳಿ ನಿಮಗೆ ನಡೆಯುತಿದ್ದ ಸ್ಪೆಷಲ್ ಕ್ಲಾಸಲ್ಲಿ ನಾನು ಕುಳಿತು ಪಾಠ ಕೇಳಿದ್ದು ನಿನಗೆ ನೆನಪಿದೆಯ...? ಇಂಗ್ಲಿಷ್ ಅಧ್ಯಾಪಕ ಗಂಗಾಧರರೇನೋ ಖುಷಿಯಾಗಿದ್ದರು. ನಿಜ ಹೇಳ ಬೇಕೆಂದರೆ ಇಂಗ್ಲಿಷ್ ಎಂದರೆ ನನಗೆ ಅಷ್ಟಕಷ್ಟೇ.

     ಒಂದು ದೊಡ್ಡ ಹೆಬ್ಬಾವು ರಸ್ತೆ ದಾಟುತಿದ್ದುದರಿಂದ ಒಮ್ಮೆಲೇ ಬ್ರೇಕ್ ಹಾಕಿ. ನನ್ನ ಯೋಚನಾಲಹರಿಯಿಂದ ಹೊರ ಬಂದೆ.

   
    ನಮ್ಮ ಕಾರಿನೊಂದಿಗೆ ಮಾರ್ಗ ಬದಿಯ ಮರಗಳು ಓಡೋಡಿ ಬರುತ್ತಿದ್ದವು. ಸಣ್ಣದಾಗಿ ತುಂತುರು ಮಳೆ ಬೀಳತೊಡಗಿತ್ತು. ಜೊತೆಗೆ ಇಷ್ಟೊತ್ತಿಗೆ ಬೀಸುತಿದ್ದ ಕುಳಿರ್ಗಾಳಿ ಇದೀಗ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿತ್ತು. ಮಳೆಯೆಂಬುವುದು ಪ್ರಯಾಣಕ್ಕೆ ಅಧ್ಬುತ ಸಾಥ್.  ವೈಪರುಗಳು ವಾಹನದ ಮುಂದಿನ ಗಾಜಿನ ಮೇಲೆ ಬೀಳುವ ಹನಿಗಳನ್ನು ವರೆಸಲು ಅಲೆದು ಅಲೆದು ಸುಸ್ತಾಗ ಬೇಕು. ನಮ್ಮ ಇಕೊಸ್ಪೋರ್ಟ್ ಗಾಡಿ ಹಾಸನ ತಲುಪಿತು. ಗೆಳೆಯ ರೆನ್ನಿ ಅಶೋಕ್ ಅಲ್ಲಿ ಫ್ರೆಶ್ ಆಗಿ ಕಾಯುತಿದ್ದ. ತಮಾಷೆಯಾಗಿ ಮಾತು ಶುರು ಮಾಡಿದವನೇ ಕೈ ಕುಲುಕಿದ. ರೆನ್ನಿಯ ಮಾತಿನ ಗದ್ದಲಕ್ಕೆ ಹಿಂದಿನ ಸೀಟಿನಲ್ಲಿ ನಿದ್ದೆಗೆ ಜಾರಿದ್ದ ರಶೀಧ್ ಒಮ್ಮೆಲೆ ಎಚ್ಚರಗೊಂಡು ಗರಬಡಿದವನಂತೆ ಕುಳಿತುಕೊಂಡ. ರೆನ್ನಿಯನ್ನು ನೋಡಿದವನೇ ನಮಸ್ಕಾರ ಎಂದ. ರೆನ್ನಿ ಮುಗುಳ್ ನಕ್ಕ. ನಾನು ಕಾರಿನ ಸ್ಟಿಯರಿಂಗನ್ನು ರೆನ್ನಿಯ ಕೈಗೆ ಕೊಟ್ಟು ಹಿಂದಿನ ಸೀಟಿಗೆ ಒರಗಿದೆ. ರೆನ್ನಿ ತನ್ನ ಕೈಯಲ್ಲಿದ್ದ ಪೆನ್ ಡ್ರೈವನ್ನು ಗಾಡಿಗೆ ಸಿಕ್ಕಿಸಿದ. ಮುಖೇಶ್ ಹಾಡಿದ 1970ರಲ್ಲಿ ಬಿಡುಗಡೆಯಾದ "ಮೇರಾ ನಾಮ್ ಜೋಕರ್  ಹಿಂದಿ ಚಿತ್ರದ  ಹಾಡು "ಜಾನೆ... ಕಹಾ.....  ಗಯೇ... ವೊ...  ದಿನ್.... ಕೆಹ್ ತೇತೆ...  ರಾಹ್ ಮೆ.. ಚಾಹೆ..  ಕಹೇ..  ತುಮ್ ಭೀ ರಹೋ...  ಚಾಹೇಂಗೆ ತುಮಕೋ ಉಮ್ರ್ ಬರ್..   ಸುಶ್ರಾವ್ಯವಾಗಿ ಬರತೊಡಗಿತು.   ನಾನು ವಾಹ...ವಾಹ... ಎಂದೆ. ರಶೀಧ್ ನನ್ನ ಮುಖ ನೋಡಿ ನಕ್ಕ.ಅವನಿಗೆ ಗೊತ್ತು ನಾನು ಹೆಚ್ಚು ಇಷ್ಟಪಡುವ ಸಾಂಗ್ ಅದು. ನಾನು ಈ ಹಾಡನ್ನು ಖುಷಿಯಾದಾಗ ಕೇಳಿದ್ದೇನೆ, ಬೇಸರಗೊಂಡಾಗ ಕೇಳಿದ್ದೇನೆ, ಮತ್ತೆ ಮತ್ತೆ ಕೇಳಿದ್ದೇನೆ, ರಾತ್ರಿ ನಿದ್ದೆ ಬಾರದೆ ಪದೇ ಪದೇ ಮಗ್ಗುಲು ಬದಲಾಯಿಸುತಿದ್ದಾಗ ಕೇಳಿದ್ದೇನೆ. ಕೇಳುತ್ತಲೇ ನಿದ್ದೆ ಹೋಗಿದ್ದೇನೆ. ಹಾಡು ಕೇಳುತ್ತಲೇ ಕಣ್ಣೀರಾಗಿದ್ದೇನೆ. 
  
     ರಶೀಧ್ ತನ್ನಲ್ಲಿದ್ದ ಮೊಬೈಲಿಗೆ ಶರಣಾದ. ರೆನ್ನಿ ಮೌನವಾಗಿ ಗಾಡಿ ಓಡಿಸುತ್ತಿದ್ದ ನಾನು ಎಸ್ ಉಮೇಶ್ ಕನ್ನಡಕ್ಕೆ ಅನುವಾದ ಮಾಡಿದ ಜೆಫ್ರಿ ಜೆಸ್ಲೊ ಬರೆದ ಸಾವಿನ ಸಾಂಗತ್ಯದಲ್ಲಿ ಬದುಕಿನ ಸಾರ್ಥಕತೆ ಸಾರಿದ ಅಮೇರಿಕದ ಕಂಪ್ಯೂಟರ್ ವಿಜ್ಞಾನಿಯ ರೋಚಕ ಕಥೆ ದಿ ಲಾಸ್ಟ್ ಲೆಕ್ಚರ್ ಎಂಬ ಪುಸ್ತಕ ಎತ್ತಿಕೊಂಡೆ. ಸಾವಿನ ಬಗ್ಗೆ ಮಾತಾಡುವುದು ಸುಲಭ.ಸಾವು ಹೀಗೆ ಬರಬಹುದೋ ಹಾಗೆ ಬರಬಹುದೋ ಎಂದು ಕಲ್ಪಿಸಿಕೊಳ್ಳುವುದೂ ಸುಲಭ. ಸಾವು ಹೀಗೆ ಬರಲಿ ಎಂದು ಆಸೆ ಪಡುವುದು ಸುಲಭ. ತುಂಬು ಆರೋಗ್ಯವಂತನೊಬ್ಬ ಸಾವಿನ ಬಗ್ಗೆ ಆ ಕ್ಷಣದ ತಲ್ಲಣದ ಬಗ್ಗೆ, ಸಾವಿನ ಅನಿವಾರ್ಯತೆಯ ಬಗ್ಗೆ ಬಾಷಣ ಹೊಡೆಯುವುದು, ಪ್ರಬಂಧ ಬರೆಯುವುದು ಇನ್ನೂ ಸುಲಭ. ಆದರೆ ಸಾವು ಕಣ್ಣ ಮುಂದೆಯೇ ಗಿರಗಿಟ್ಲೆ ತಿರುಗುತ್ತಿದೆ; ಮುಂದಿನ  ಕೆಲವೇ ದಿನಗಳಲ್ಲಿ ಬದುಕೇ ಮುಗಿದೇ ಹೋಗಳಿದೆ ಎಂದು ಗೊತ್ತಾದಾಗ, ನಗು ನಗುತ್ತಲೇ 'ಲೈಫ್ ಇಸ್ ಬ್ಯೂಟಿಫುಲ್ ಬಿ ಹ್ಯಾಪಿ ಆಲ್ವೇಸ್' ಎಂದು ಹೇಳುವುದಿದೆಯಲ್ಲ ? ಅದು ಕಷ್ಟ ಕಷ್ಟ. ಈ ಮುನ್ನುಡಿಯೊಂದಿಗೆ ಪ್ರಾರಂಭವಾಗಿತ್ತು. ರಾಂಡಿ ಪಾಶ್ ಎಂಬ ಕಂಪ್ಯೂಟರ್ ವಿಜ್ಞಾನಿಯ ವೈದ್ಯರು ಡಾ. ಕ್ವಿನಾನ್ಸ್ 'ಐ ಯಾಮ್ ಸಾರಿ ಡಿಯರ್ ಕ್ಯಾನ್ಸರ್ ಇಸ್ ಇನ್ ಫೈನಲ್ ಸ್ಟೇಜ್' ಎಂದು ಬಿಟ್ಟರಲ್ಲ..! ಆ ನಂತರ ರಾಂಡಿ ಪಾಶ್ ನೀಡಿದ 'ದಿ ಲಾಸ್ಟ್ ಲೆಕ್ಚರ್'. ಆ ಲೆಕ್ಚರ್ ಸಾವಿನ ಬಗ್ಗೆ ಆಗಿರಲಿಲ್ಲ. ಕ್ಯಾನ್ಸರ್ ಬಗ್ಗೆಯೂ ಆಗಿರಲಿಲ್ಲ. ಮತ್ಯಾವುದರ ಬಗ್ಗೆ ಆಗಿರಬಹುದು ಎಂದು ಕುತೂಹಲದಿಂದ ಓದಲು ಶುರುವಿಟ್ಟುಕೊಂಡೆ.    
  
    ರೆನ್ನಿ ಕಾರನ್ನು ನೂರ ಅರವತ್ತು ನೂರ ಎಪ್ಪತ್ತರ ಆಸುಪಾಸಿನಲ್ಲಿ ಓಡಿಸುತಿದ್ದ. ನಾನು ಸ್ಪೀಡ್ ಇಷ್ಟಪಡುತ್ತೇನೆ. ಬೆಟ್ಟಗಳಲ್ಲಿ ಕಣಿವೆಗಳಲ್ಲಿ ಬೈತಲೆಗಳಂತಹ ನಿರಾಳ ರಸ್ತೆಗಳಲ್ಲಿ ನೂರ ಅರವತ್ತರ ವೇಗದಲ್ಲಿ ಗಾಡಿ ಓಡಿಸುವುದೆಂದರೆ ಅಧ್ಭುತ ಕ್ರಿಯೆ. ಒಮ್ಮೆ ಹೊರಗೆ ಕಣ್ಣು ಹಾಯಿಸಿದೆ. ರೆನ್ನೀ... ಎಂದು ಕೂಗಿದೆ. ರೆನ್ನಿ ಆಕ್ಷಿಲರೇಟರಿಂದ ಕಾಲನ್ನು ನಿಧಾನವಾಗಿ ಮೇಲೆತ್ತಿದ,  ಬ್ರೇಕ್ ಹಾಕಿದ. ಗಾಡಿ ನಿಂತಿತು. ಸ್ವಲ್ಪ ಹಿಂದಕ್ಕೆ ತೆಗಿ ಅಂದೆ. ಯಾಕೆ.? ಏನಾಯಿತು.. ? ರೆನ್ನಿ ಗಾಬರಿಯಿಂದ ಕೇಳಿದ. ರೆಡ್ಡಿಯನ್ನು ನೋಡಿದ ಹಾಗೆ ಆಯಿತು ಎಂದೆ. ಕಾರು ಹಿಂದಕ್ಕೆ ಚಲಿಸಿತು. ಹೌದು ರೆಡ್ಡಿಯೇ ..! ತನ್ನ ಮಾರುತಿ ೮೦೦ ನ್ನು ಪಕ್ಕದಲ್ಲಿ ನಿಲ್ಲಿಸಿ ಯಾರೊಂದಿಗೋ ಮಾತಾಡುತಿದ್ದ. ಕಳೆದ ಮೂರು ವರ್ಷಗಳಿಂದ ನನ್ನ ಫೋನ್ ಗೆ ಮಾತಾಡಲು ಸಿಗುತ್ತಿರಲಿಲ್ಲ. ಆತ ನನಗೆ ಕೊಡಬೇಕಿದ್ದ ಹಣ ಸುಮಾರು ಒಂದು ಲಕ್ಷ. ಆಗ ನನಗೆ ಅದರ ಮೌಲ್ಯ ಹತ್ತು ಲಕ್ಷದಷ್ಟು. ರೆನ್ನಿಯ ಮೂಲಕ ಪರಿಚಯವಾದ ಜಯಗೋಪಾಲ್ ರೆಡ್ಡಿ ಮೂಲತಃ ಆಂಧ್ರದ ತಿರುಪತಿಯವನು. ಪವರ್ ಪ್ರಾಜೆಕ್ಟ್ ಗಳನ್ನು ಹರಾಜಿನ  ಮೂಲಕ ಪಡೆದು ದ. ಕ. ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾರ್ಯಗತಗೊಳಿಸುತ್ತಿದ್ದ.  ರೆಡ್ಡಿ ಒಳ್ಳೆಯ ಮನುಷ್ಯನೇ ಆಗಿದ್ದ. ಅವನಿಗೆ ಬಿಸಿನೆಸ್ಸಿನಲ್ಲಿ ಹಣ ತೊಡಗಿಸಲು ನನ್ನಂತಹ ಎಂ.ಬಿ.ಎ. ಪದವಿ ಪಡೆದ ಯುವಕ ಬೇಕಾಗಿತ್ತು.  ನಾನು ಅವನೊಂದಿಗೆ ಹಣ ತೊಡಗಿಸಿದ್ದೆ. ನನ್ನ ಒಂದು ಮಿಸ್ ಕಾಲ್ ನೋಡಿದರೆ ಸಾಕು ಕೂಡಲೇ ಕಾಲ್ ಮಾಡುತಿದ್ದ ರೆಡ್ಡಿ ಇಂದು ನನ್ನಿಂದ ನೂರು ಕಾಲ್ ಗಳು ಅವನ ಮೊಬೈಲಿಗೆ ಹೋಗುತಿದ್ದರೂ ರಿಸೀವ್ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ...! 
    
     ಹೌದು ನಾನು ಎಂ.ಬಿ.ಎ. ಪದವಿ ಪಡೆದಿದ್ದೇನೆ ಎಂದರೆ ಕೆಲವೊಮ್ಮೆ ನನಗೇ ಆಶ್ಚರ್ಯವಾಗುತ್ತದೆ. ಓದಿನಲ್ಲಿ ಶ್ರೀಮಂತ ನಂತಿದ್ದರೆ, ಹಣದ ವಿಚಾರದಲ್ಲಿ ಬಡವನಾಗಿದ್ದೆ. ಅಮ್ಮ ಮತ್ತು ನನ್ನ ತಂಗಿ ಹತ್ತಿರದ ಧನವಂತರ ಮನೆಗಳಲ್ಲಿ ಮನೆ ಕೆಲಸ ಮಾಡುತಿದ್ದರು. ಬ್ಯಾಂಕಿನಲ್ಲಿ ಸಾಲ ಪಡೆದು ಎಂ.ಬಿ.ಎ. ಗೆ ಸೇರಿಕೊಂಡೆ. ಆ ದಿನಗಳಲ್ಲಿ ಎಂ.ಬಿ.ಎ. ಅರ್ಜಿ ಫಾರಂಗೆ ಮುನ್ನೂರು ರೂಪಾಯಿಯನ್ನು ಗಳೆಯನಲ್ಲಿ ಸಾಲ ಪಡೆದಿದ್ದೇನೆ ಎಂದರೆ ನಂಬಲು ಕಷ್ಟವಾದರೂ ನಿಜ. ಒಮ್ಮೆ ನನ್ನ ತಂಗಿ ಕೆಲಸ ಮಾಡುತಿದ್ದ ಸಾಹೇಬರ ಮನೆಯ ಸಂಬಂಧಿಕರೊಬ್ಬರು ಉಪಯೋಗಿಸಿದ ಇನ್ನೇನು ಬೇಡ ಎಂದು ಬಿಸಾಡುವ ಮುಂಚೆ ಒಂದು ಶರ್ಟು ಒಂದು ಜೊತೆ ಶೂ ಹಾಗೂ ಒಂದು ಬಂಗಾರದ ಬಣ್ಣದ ವಾಚು ನಿನ್ನ ಅಣ್ಣನಿಗೆ ಎಂದು ಕೊಟ್ಟಿದ್ದರು.ಖುಷಿಯಿಂದಲೇ ಎರಡು ವರ್ಷ ಉಪಯೋಗಿಸಿದ್ದೆ. ಅವರು ಕೊಟ್ಟಿದ್ದ ಶರ್ಟ್ 'ಲೂಯಿಸ್  ಫಿಲಿಪೆ' ಮತ್ತು ಶೂ 'ಲಿಬರ್ಟಿ' ಆಗಿತ್ತು. ನನಗೆ ಗೊತ್ತಿರಲಿಲ್ಲ. ಒಮ್ಮೆ ನನ್ನ ಕ್ಲಾಸ್ ಮೇಟ್ ನನ್ನ ಶರ್ಟಿನ ಬೆಲೆ ಕೇಳಿದ, ನನಗೆ ಆ ದಿನಗಳಲ್ಲಿ ಶರ್ಟಿನ ಬ್ರ್ಯಾಂಡ್, ಅದರ ಬೆಲೆ ಮುಖ್ಯವಾಗಿರಲಿಲ್ಲ. ಶರ್ಟ್ ಇದ್ದರೆ ಸಾಕಿತ್ತು. ಎಷ್ಟು ಹೇಳುವುದು ಎಂದು ಗೊಂದಲದಿಂದ ಕಸಿವಿಸಿಗೊಂಡೆ. ನೂರ ಐವತ್ತು ಹೇಳಲೋ ಅಥವಾ ಇನ್ನೂರು ಹೇಳಲೋ ಎಂದು ಗೊಂದಲದಲ್ಲೇ ಗಿಫ್ಟ್ ಸಿಕ್ಕಿದ್ದು ಎಂದು ತಪ್ಪಿಸಿಕೊಂಡೆ. ಅವನೇ ಹೇಳಿದ ನನ್ನ ತಂದೆಯಲ್ಲಿ ಇರುವುದು ಇಂತಹವುದೇ ಶರ್ಟ್ ಇದರ ಬೆಲೆ ಎರಡು ಸಾವಿರ  ಎಂದು. ಅಬ್ಬಾ ಬಚವಾದೆ ಎಂದು ಕೊಂಡೆ. ನನ್ನ ಕಷ್ಟ ಹೇಳಿ ಅನುಕಂಪ ಗಿಟ್ಟಿಸುವುದು ನನಗೆ ಇಷ್ಟವಿರಲಿಲ್ಲ. ನನ್ನ ಎರಡು ವರ್ಷದ ಎಂ.ಬಿ.ಎ. ಪದವಿಯ ಜೀವನ ಗಾಜಿನ ಚೂರುಗಳ ನಡುವೆ ಜೀವಿಸಿದಂತೆ ಭಾಸವಾಗಿತ್ತು.      
   
     ಯಾವಾಗ ನಾನು ರೆಡ್ದಿಯೊಂದಿಗೆ ವ್ಯವಹಾರ ಆರಂಭಿಸಿದೆನೋ ಆ ದಿನದಿಂದಲೇ ಅವನ ಗ್ರಹಚಾರ ಕೆಟ್ಟಿತು. ಬೆಂಗಳೂರಿನಲ್ಲಿ ರೆಡ್ಡಿಯೊಂದಿಗೆ ವ್ಯವಹಾರ ಮಾಡುತಿದ್ದ ಕುಮಾರ್ ಎನ್ನುವ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ. ರೆಡ್ಡಿಯ ಹೆಚ್ಚಿನ ಎಲ್ಲಾ ವ್ಯವಹಾರಗಳು ಕೇವಲ ನಂಬಿಕೆಯಿಂದಲೇ ನಡೆಯುತಿತ್ತು. ಯಾವುದೇ ದಾಖಲೆ ಇಲ್ಲದ ಕಾರಣ ರೆಡ್ಡಿ ಸುಮಾರು ಹದಿನೈದು ಲಕ್ಷ ಕಳೆದುಕೊಂಡ. ರೆಡ್ಡಿ ದಿನದಿಂದ ದಿನಕ್ಕೆ ಪಾತಾಳಕ್ಕಿಳಿಯ ತೊಡಗಿದ. ಅವನ ಜಲವಿದ್ಯುತ್ ಯೋಜನೆ ಜನವಿರೋಧಿಯಾಯಿತು. ನಾನಂತು ಕಂಗಾಲಾಗಿ ಹೋದೆ. ಲಕ್ಷಾಧಿಪತಿಯಾಗಿದ್ದ ರೆಡ್ಡಿಗೆ ತನ್ನ ಕಾರಿಗೆ ಪೆಟ್ರೋಲ್ ಹಾಕುವುದಕ್ಕೇ  ಕಷ್ಟವಾಯಿತು. ಪ್ರತೀ ದಿನವೂ ನಾನು ರೆಡ್ಡಿಗೆ ಫೋನ್ ಮಾಡುತ್ತಿದ್ದೆ ನಾನು ಸಾಯುವ  ಪರಿಸ್ಥಿತಿ ಬಂದರೂ ನಿಮ್ಮ ಹಣ ಕೊಟ್ಟೇ ಪ್ರಾಣ ಬಿಡುತ್ತೇನೆ ಎಂದಿದ್ದ ರೆಡ್ಡಿಯನ್ನು ಕಾಣದೆ ಇಂದಿಗೆ ಸರಿ ಸುಮಾರು ಮೂರು ವರ್ಷವಾಗಿತ್ತು.
    
   ರೆಡ್ಡಿ ನಮ್ಮನ್ನು ನೋಡಿದ ಕೂಡಲೇ ಹತ್ತಿರ ಬಂದು ಅತ್ಯಂತ ವಿನಯದಿಂದ ಮಾತಾಡಿದ. ನನ್ನ ಅಳಿದುಳಿದ ಜಾಗ ಮಾರಾಟಕ್ಕಿಟ್ಟಿದ್ದೀನಿ ಇನ್ನೆರಡು ತಿಂಗಳಲ್ಲಿ ನಿಮ್ಮ ಹಣ ಕೊಡುತ್ತೇನೆ, ನಿಮಗೆ ಫೋನಿನಲ್ಲಿ ಉತ್ತರ ಕೊಡುಲು ನನಗೆ ಸಾಧ್ಯವಾಗುತ್ತಿರಲಿಲ್ಲ ದಯವಿಟ್ಟು ಕ್ಷಮಿಸಿ ಎಂದ. ಒಂದು ಕಾಲದಲ್ಲಿ ಲಕ್ಷ ಲಕ್ಷ ಎಣಿಸುತಿದ್ದ, ಲಕ್ಷಾಧಿಪತಿಯಾಗಿದ್ದ ರೆಡ್ಡಿ ಇಂದು ಎಲ್ಲವನ್ನೂ ಕಳಕೊಂಡು ಅವನಲ್ಲಿ ಜೀವನ ಉತ್ಸವೇ ಇಲ್ಲದಂತಾಗಿದೆ. ಒಂದು ಕಾಲದಲ್ಲಿ ರುಪಾಯಿ ರುಪಾಯಿಗೆ ಒದ್ದಾಡಿದ್ದ ನಾನು.... ಇಂದು ನನ್ನ ಜೀವನದಲ್ಲಿ ಎಷ್ಟೊಂದು ಬದಲಾವಣೆಯಾಗಿದೆ....!  ದೇವರು ಆಡಿಸುವ ಜೀವನ ನಾಟಕ ಅಂದರೆ ಇದುವೇ ಅಲ್ವಾ..? ಆತ ತನ್ನ ಸಿಮ್ ಇನ್ನೂ ಬದಲಾಯಿಸದೆ ಇರುವುದರಿಂದ  ಹಣ  ಕೊಡಬಹುದು ಎಂದು ಅಲ್ಲಿಂದ ಹೊರಟೆವ್.   
   
    ಹೊಟ್ಟೆ ಹಸಿಯುತ್ತಿತ್ತು ಹತ್ತಿರದ ಹೋಟೆಲಿಗೆ ಹೋಗಿ ತಿಂಡಿ ಆರ್ಡರ್ ಮಾಡಿದ ರೆನ್ನಿ, ನನ್ನನ್ನು ನೋಡಿ ಮಾತಾಡಿ ಕಾಂತರೆ ಅಂದ. ಹೌದು ರೆನ್ನಿ ನನ್ನನ್ನು ಕರೆಯುವುದು ಹಾಗೆನೇ ನನ್ನ ಹೆಸರು 'ಚಂದ್ರ'ನಿಗೆ ಕಾಂತ ಅಂಥ ಸೇರಿಸಿ ಚಂದ್ರನನ್ನು ಬಿಟ್ಟು 'ಕಾಂತ' ಎಂದು ಕರೆಯುತ್ತಾನೆ. ನನ್ನ ಮನಸ್ಸಿನಲ್ಲಿ ಸೌಂದರ್ಯಳ ಬಗ್ಗೆ ಯೋಚಿಸುತ್ತಿದ್ದುದನ್ನು ಮಾತಿನ ಮೂಲಕ ಮುಂದುವರಿಸಿದೆ. ರೆನ್ನಿ ಒಂದು ಕ್ಷಣ ಮೌನವಾದ. ಆತ ಇದನ್ನು ನಿರೀಕ್ಷಿಸಿರಲಿಲ್ಲ. ರೆನ್ನಿಯೊಂದಿಗೆ ರಶೀಧ್ ನನ್ನ ಕಥೆಗೆ ಕಿವಿಯಾದ. 
   
     ನಾನು ಕಾಲೇಜಿಗೆ ಹೋಗುವಾಗ ಸೌಂದರ್ಯಳ ಮುಂದೆ ತುಂಬಾ ಸುಂದರವಾಗಿ ಕಾಣಲು ಪ್ರಯತ್ನ ಪಡುತ್ತಿದ್ದೆ. ನನ್ನಲ್ಲಿರುವ ಎರಡೇ ಜೊತೆ ಬಟ್ಟೆಗಳಿಗೆ ಕೆಂಡ ಹಾಕಿ ಉಪಯೋಗಿಸುವ ಕಬ್ಬಿಣದ ಇಸ್ತ್ರಿಪೆಟ್ಟಿಗೆಯಿಂದ ನೀಟಾಗಿ ಇಸ್ತ್ರಿ ಮಾಡಿ ತಂಗಿಯಂದಿರು ಉಪಯೋಗಿಸುತ್ತಿದ್ದ ಪೌಡರನ್ನು ಹಾಕಿ ಬೆಳ್ಳಗಾಗುತಿದ್ದೆ. ಕಿಸೆಯಲ್ಲಿ ಇರುತಿದ್ದುದು ದಿನಾಲು ಅಮ್ಮ ಕೊಡುತಿದ್ದ ಹತ್ತು ರೂಪಾಯಿ, ಮಧ್ಯಾಹ್ನ ಊಟಕ್ಕೆ ಕಾಲೇಜಿಗೆ ದಾನಿಗಳು ಕೊಡುತಿದ್ದ ಮಿಡ್ಡೇ ಮೀಲ್. ನನಗೆ ಸೌಂದರ್ಯಳನ್ನು ಕಂಡೊಡನೆ ಯಾಕೋ ಹೆದರಿಕೆಯಿಂದ ನನ್ನ ಹ್ರದಯ ಬಡಿತ ಹೆಚ್ಚಾಗುತಿತ್ತು. ಇದು ಪುನಾರಾವರ್ತನೆ ಆಗುತಿದ್ದುದರಿಂದ ನನ್ನ ಜೀವಕ್ಕೆ ಏನಾದರು ಅಪಾಯ ಆಗಬಹುದೆಂದುಕೊಂಡು ನನ್ನ ಪದವಿಪೂರ್ವ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಭೇಟಿಯಾಗಿದ್ದೆ.  ಅವರು 'ಇಪ್ನೋಟಿಸಮ್' ಮಾಡಿ ಮನಸ್ಸಿನ ಕೆಲವು ಪ್ರಶ್ನೆಗಳಿಗೆ  ಪರಿಹಾರ  ಹೇಳುತಿದ್ದರು.   ನನ್ನ       ಸಮಸ್ಯೆಯನ್ನು ಕೇಳಿದ ಅವರು ಒಂದು ಪ್ರಸಾದವನ್ನು ಮಾತ್ರ ಕೊಟ್ಟಿದ್ದರು. ಅದರಿಂದ ನನ್ನ ಸಮಸ್ಯೆ ಪರಿಹಾರವಾಗಿರಲಿಲ್ಲ. ಈಗ ನನಗನಿಸುತ್ತಿದೆ ಇದು ಸೌಂದರ್ಯಳ ಸಮಸ್ಯೆಯೂ ಆಗಿದ್ದಿರಬಹುದು. ಒಮ್ಮೆ ನಾನು ದೀಪಾವಳಿಯ ಗ್ರಿಟಿಂಗ್ಸ್ ಕಾರ್ಡ್ ಒಂದನ್ನು ಕಾಲೇಜಿಗೆ ಅಂಚೆ ಚೀಟಿ ಹಾಕದೆ ಪೋಸ್ಟ್ ಮಾಡಿದ್ದೆ. ಪೋಸ್ಟ್ ನೇರ ಅವಳ ಕ್ಲಾಸಿಗೆ ಹೋಗಿದ್ದರಿಂದ ಅಂಚೆ ಚೀಟಿನ ಹಣ ಪಾವತಿಸಿ ಗ್ರೀಟಿಂಗ್ಸ್ ಪಡೆದ ಅವಳು ಮುಜುಗರಕ್ಕೆ ಒಳಗಾಗಿದ್ದಳು. ಇನ್ನು ಮುಂದೆ ಹಾಗೆ ಮಾಡಬಾರದಂತೆ ಬೇರೆಯವರಿಂದ ನನ್ನ ಕಿವಿಗೆ ಮುಟ್ಟಿಸಿದ್ದಳು.
    
     ನಾನು ಸೌಂದರ್ಯಳೊಂದಿಗೆ ಕೊನೆಯದಾಗಿ ಮಾತಾಡಿದ್ದು ಕಾಲೇಜಿನ ಕೊನೆಯ ದಿನವಾಗಿರಬಹುದು. ಅ ಕೊನೆಯ ದಿನದಂದು ತುಂಬಾ ಭಾವೊದ್ವೇಗಗೊಂಡಿದ್ದೆ. ನಾನು ಜೀವನದಲ್ಲಿ ಮೀಸೆ ಬೋಳಿಸಿದ್ದೇನೆಂದರೆ ಆ ದಿನ ಮಾತ್ರ. ಕಾಲೇಜಿನ ಗೇಟಿನ ಹೊರಗೆ ಸೌಂದರ್ಯಳೊಂದಿಗೆ ಕೇಳಿದೆ: ಮುಂದೇನ್ ಮಾಡ್ ಬೇಕೆಂದಿದ್ದೀರ ? 
ನನ್ನ ಮುಖ ನೋಡಿ ಒಮ್ಮೆ ನಕ್ಕಳು. ಮೀಸೆ  ಬೋಳಿಸಿದ್ದೆ ನನ್ನನ್ನು ನೋಡಿದಾಗಲೇ ಅವಳಿಗೆ ನಗು ಬರುತಿತ್ತು. ನಾನೂ ಜೋರಾಗಿ ನಕ್ಕೆ. 
ಅವಳು ಹೇಳಿದಳು ;  ಎಮ್. ಎಸ್. ಸಿ. ಮಾಡ್ ಬೇಕು. 
ಅವಳು ನನ್ನನ್ನು ಕೇಳಿದಳು ; ನೀವೇನ್ ಮಾಡ್ ಬೇಕೆಂದಿದ್ದೀರ ?
ನಾನು ಸಿ.ಎ. ಅಂದೆ. 

     ಆದರೆ ನಮ್ಮಿಬ್ಬರ ದಾರಿನೂ ಬೇರೆ ಬೇರೆ ಆಯಿತು. ಸದ್ಯದಲ್ಲೇ ಸೌಂದರ್ಯಳಿಗೆ ಮದುವೆಯಂತೆ ಎಂದು ಕೇಳ್ಪಟ್ಟಿದ್ದೆ. ಆದರೆ ನಾನು ನಂಬಿರಲಿಲ್ಲ. ಎಂ. ಎಸ್. ಸಿ. ಮಾಡ್ಬೇಕು ಎಂದು ಹೇಳಿದ್ದ ಸೌಂದರ್ಯಳನ್ನು ನಾನು ಎಂ. ಬಿ. ಎ. ಸೇರಿಕೊಂಡಾಗ ಯುನಿವರ್ಸಿಟಿ ಕ್ಯಾಂಪಸ್ಸಲ್ಲಿ ಹೂಡುಕಾಡಿದ್ದೆ. ಆದರೆ ಅಲ್ಲಿ 'ಸ' ದೊಂದಿಗೆ ಪ್ರಾರಂಭವಾಗುವ ಅವಳ ಮೂರು ಗೆಳತಿಯರೊಂದಿಗೆ ಸೌಂದರ್ಯ  ಇರಲಿಲ್ಲ. ಆ ದಿನ 'ನವ್ಯಶ್ರೀ' ನನ್ನನ್ನು ನೋಡಿ ಯಾಕೇ ಹೀಗಾಗಿದ್ದೀರಾ ? ಎಂದು ಕೇಳಿದ್ದಳು. ಹೌದು ನಾನು ಆಗ  ಅಸ್ಥಿಪಂಜರದಂತಾಗಿದ್ದೆ.

           ಯುನಿವರ್ಸಿಟಿ ಹಾಸ್ಟೇಲಿನಲ್ಲಿ ಗ್ರೌಂಡ್ ಪ್ಲೋರಿನಲ್ಲಿದ್ದು, ಕ್ಲಾಸಿಗೆ ಹೋಗುವ ಮುಂಚೆ ಎರಡನೇ ಫ್ಲೋರಿಗೆ ರೆಡಿಯಾಗಿ ಬರುತ್ತಿದ್ದು, ಬರಬರುತ್ತಾ ನನ್ನ ಗೆಳೆಯನಾಗಿ, ಎರಡು ದೇಹ ಒಂದು ಪ್ರಾಣ ಎಂಬಂತೆ ಆದ 'ರಾಘವ್', ಕೆಲಸಕ್ಕಾಗಿ ನಾನು ಊರಿನಲ್ಲಿ ಅವನು ಬೆಂಗಳೂರಿನಲ್ಲಿ ಅಲೆಯುತಿದ್ದಾಗ, ಪ್ರತಿ ದಿನ ನನಗೆ ಫೋನಾಯಿಸುತಿದ್ದ ರಾಘವ್, ನಾನು ಮಹಾ ಬೆಂಗಳೂರಿಗೆ ಮೊದಲ ಸಲ ಕಾಲಿಡುತ್ತಿದ್ದಾಗ , ಒಂದು ಕಡೆ ಅಲರಾಮ್ ಇಟ್ಟು ಇನ್ನೊಂದು ಕಡೆ ತನ್ನ ಅರ್ಧ ಕೇಜಿ ಭಾರದ ಉದ್ದ ಕೊಂಬಿರುವ ಮೊಬೈಲನ್ನು ನನ್ನ ಕರೆಗಾಗಿ ರಾತ್ರಿ ಮೂರು ಗಂಟೆಗೆ ಎಚ್ಚರಗೊಂಡು ದಿಟ್ಟಿಸುತಿದ್ದ ರಾಘವ್, ಬೆಂಗಳೂರಿನಲ್ಲಿ 'ಸಿಸ್ಟೆಕ್' ಎಂಬ ಕಂಪೆನಿಯಲ್ಲಿ ಉನ್ನತ ಉದ್ಯೋಗ ಗಿಟ್ಟಿಸಿ, ನಾನು ನನ್ನ ಶಿಕ್ಷಣ ಸಾಲ ಕಟ್ಟಲು ಎರಡು ಸಾವಿರ ರುಪಾಯಿ ಕೇಳಿದಾಗ, ಬೆಂಗಳೂರಿನಿಂದ ಊರಿಗೆ ಬಂದು ಐದು ಸಾವಿರ ಕೊಟ್ಟಿದ್ದ ರಾಘವ್..!, ಬರ ಬರುತ್ತ ಬ್ಯುಸಿಯಾಗಿ, ನನ್ನೊಂದಿಗೆ ಮಾತಾಡುವುದನ್ನೇ ಮರೆತ....!, ಕಳೆದ ಎರಡು ವರ್ಷದ ಮುಂಚೆ ದೀಪಾವಳಿಯಂದು ಕೊನೇಯ ಸಲ ಮಾತಾಡಿದ ರಾಘವ್ ನ ಬಗ್ಗೆಯೂ ಹೇಳಿದೆ.

    ಹೊಟೇಲಿನಿಂದ ಹೊರಟಾಗ ಕಾರಿನ ಕೀಲಿಯನ್ನು ರಶೀಧ್ ನ ಕೈಗಿತ್ತೆ. ವಾಹನ ಮಂಡ್ಯದ ಮಳವಳ್ಳಿ ತಲುಪಿತು. ಅಲ್ಲಿಂದ ಮೂವತ್ತು ಕಿ.ಮೀ. ದೂರದಲ್ಲಿದೆ ಶಿವನ ಸಮುದ್ರ. ದಾರಿಯಲ್ಲಿ ಹೊಲ, ಗದ್ದೆ, ತೋಟಗಳ ದ್ರಶ್ಯ ಮನಸ್ಸಿಗೆ ಮುದ ನೀಡುತಿತ್ತು.
ಗಗನ ಚುಕ್ಕಿಗೆ ಹೋದೆವು ಶಿವನ ಸಮುದ್ರದಿಂದ ಹತ್ತು ಕಿ.ಮೀ. ದೂರದಲ್ಲಿ ಕಾವೇರಿ ನದಿ ಬೆಟ್ಟ, ಕಣಿವೆಗಳ ಮೂಲಕ ಹರಿದು ಗಗನ ಚುಕ್ಕಿಯಾಗಿ ರಭಸದಿಂದ ಹರಿಯುತ್ತಾಳೆ. ಕಾವೇರಿಯ ಈ ನಾಟ್ಯವನ್ನು ಬಣ್ಣಿಸುವುದು ಮಾತಿಗೆ ಸಿಗದ ವಿಷಯ. ಭರ ಚುಕ್ಕಿ ಇನ್ನು ಅರ್ಧ ಕಿ. ಮೀ. ದೂರದಲ್ಲಿದೆ ಎನ್ನುವಾಗಲೇ ಕಾವೇರಿಯ ಭೋರ್ಗರೆತ ಕಿವಿ ಮುಟ್ಟುತಿತ್ತು. ಹತ್ತಿರ ಹೋದದ್ದೇ ಒಂದು ಬಂಡೆಯ ಮೇಲೆ ನಿಂತು ನೋಡಿದರೆ, ಕ್ಷೀರ ಸಾಗರದ ಅಲೆಯೊಂದು ಇತ್ತ ಹರಿದು ಬರುವಂತೆ ಕಾವೇರಿ ನೊರೆ ಹಾಲಿನಂತೆ ಮೇಲಿಂದ ಜಿಗಿಯುತ್ತಿದ್ದಳು. ಸ್ವಲ್ಪ ಹೊತ್ತು ಏನನ್ನೂ ಯೋಚಿಸದೆ ಅವಳಂದವನ್ನು ಕಣ್ತುಂಬಿಕೊಳ್ಳುತ್ತಾ ನಿಂತು ಬಿಟ್ಟೇ. ಒಂದೊಂದೇ ಕಲ್ಲು ಚಪ್ಪಡಿಗಳನ್ನಿಳಿದು ಜಲಪಾತದ ಮಡಿಲಿಗೆ ಹೋದೆವು. ಅಲ್ಲಿ ಮಧ್ಯ ಮಧ್ಯ ಸ್ವಲ್ಪ ಜಾಗ ಬಿಟ್ಟು ನೀರು ಹರಿಯುವ ಪ್ರದೇಶ ದ್ವೀಪದಂತೆ ಮಾರ್ಪಾಡಾಗಿತ್ತು. ಈಗ ನಾವು ದ್ವೀಪ ಅನ್ನಬಹುದಾದ ಜಾಗಕ್ಕೆ ಕಾಲಿರಿಸಿದ್ದೇವು. ನೂರು ರೂಪಾಯಿ ಕೊಟ್ಟು ತೆಪ್ಪದಲ್ಲಿ ತೇಲಿಕೊಂಡು ಹೋಗುವಾಗ ನಾವು ರೋಮಾಂಚನಗೊಂಡಿದ್ದೆವು. ತೆಪ್ಪದಲ್ಲಿ ನಾವು ತೆಪ್ಪಗೆ ಕುಳಿತು ಕೊಳ್ಳದೆ ಇದ್ದುದರಿಂದ ತೆಪ್ಪ ನೀರಿನ ಸೆಳತಕ್ಕೆ ಸಿಕ್ಕು ಅತ್ತಿಂದಿತ್ತ ವಾಲಾಡಲಾರಂಬಿಸಿತ್ತು. ಆಗ ತೆಪ್ಪ ತೇಲಿಸುವವನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅಲ್ಲಿ ಕಟ್ಟಿರುವ ಟೆಂಟಿನಂತಹ ಅಂಗಡಿಯಲ್ಲಿ 'ಲೇಯ್ಸ್' ಪ್ಯಾಕೆಟ್ ಗಳನ್ನು ತೆಗೆದುಕೊಂಡವರೇ ಕ್ಯಾಮರದಲ್ಲಿ ನಮ್ಮ ಈ ಪ್ರವಾಸದ ನೆನಪನ್ನು ತುಂಬಿಕೊಳ್ಳಲು ಶುರು ಹಚ್ಚಿಕೊಂಡೆವು.ತಣ್ಣನೆಯ ಕೊರೆಯುವ ನೀರಿನೊಳಗೆ ಕಾಲನ್ನದ್ದಿ ಮಗುವಿನಂತೆ ನೀರೆರಚುತ್ತಾ ನಿಬ್ಬೆರಗಾದಗ ಗಂಟೆಗಳು ಕ್ಷಣಗಳಂತೆ ಉರುಳುತಿತ್ತು. ಕತ್ತಲಾಗುತ್ತಿರುವುದನ್ನು ಅರಿತು, ನಮ್ಮ ವಾಹನದ ಕಡೆಗೆ ಹೆಜ್ಜೆ ಸವೆಸಿ, ಅಲ್ಲಿಂದ ಮನೆಯತ್ತ ಹೊರಟೆವು. 

     ಹೌದು ನಾನು ನನ್ನ ಪತ್ನಿ ಮತ್ತು ಮಗಳು ಸಾಹಿತ್ಯಳೊಂದಿಗೆ ದೆಹಲಿಗೆ ಹೋಗಬೇಕು. ವಿಮಾನದಲ್ಲಿ ಹಾರಡಬೇಕು. ಅಲ್ಲಿ ಸೌಂದರ್ಯಳ ಗಂಡ, ಮಹಾನ್ ಚಿತ್ರ ಕಲಾವಿದನನ್ನು ಭೇಟಿಯಾಗಬೇಕು. ಸಾಧ್ಯವಾದರೆ ಹರಾಜಿನಲ್ಲಿ ಒಂದು ಚಿತ್ರ ಕಲಾಕ್ರತಿಯನ್ನು ಪಡೆದುಕೊಳ್ಳಬೇಕು. ಅಲ್ಲಿ ಸೌಂದರ್ಯಳೊಂದಿಗೆ ತುಂಬಾ ತುಂಬಾನೇ ಮಾತಾಡಬೇಕು.         

ಸೋಮವಾರ, ಆಗಸ್ಟ್ 12, 2013

ನನ್ನ ಮದುವೆಯ ಅಲ್ಬಮ್


ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿಸಿದ್ದ
ನನ್ನ ಮದುವೆಯ ಅಲ್ಬಮ್ ತೆಗೆಯುವಾಗ ನನಗನಿಸುತ್ತದೆ
ಖಾಕಿ ಶರ್ಟು ದೊಡ್ಡ ಮುಂಡಾಸಿನ
ರಾತ್ರಿ ಹೊರಗಡೆ ಮಲಗಿದ್ದಾಗ ಹುಲಿಯೊಂದು ಹಾದು ಹೋಗಿ
ಹತ್ತಿರವಿದ್ದ ನಾಯಿ ಹೆದರಿ ಚಾಪೆಯಲ್ಲೆಲ್ಲಾ ಹೇಸಿಗೆ ಮಾಡಿದ
ಕಥೆ ಹೇಳುತಿದ್ದ ನನ್ನಜ್ಜ ಇರಬೇಕಿತ್ತು

ಮದುವೆಯ ಅಲ್ಬಂನ ಪುಟ ತಿರುವಿದಾಗ  ತಂಗಿ
ನನ್ನ ಮದುವೆಗೆ ಯಾವ ಬಣ್ಣದ ಡ್ರೆಸ್ ತೊಡಲಿ..?
ಸೀರೆ ಉಟ್ಟುಕೊಳ್ಳಲೋ...? ಚೂಡಿದಾರ್ ಹಾಕಿಕೊಳ್ಳಲೋ...?
ಎಂದು ಕನ್ಫ್ಯೂಸನ್ ನಲ್ಲಿ ಮುಳುಗಿ ಕೊನೆಗೆ ಗೆಳೆಯರೊಂದಿಗೆ ಚರ್ಚಿಸಿ 
ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ ಸುಂದರ ನೆನಪು 

ಮದುವೆಯ ಅಲ್ಬಂನ ಫೋಟೋಗಳನ್ನು ನೋಡುವಾಗ 
ಬಾಲ್ಯದಲ್ಲಿ ನನ್ನೊಂದಿಗೆ ಹುಡುಗಿ ವೇಷ ಹಾಕಿ ನಾಟಕವಾಡಿದ,
ಕುಂಟಾಲ್ ಗಿಡಗಳಿಂದ ಮನೆಕಟ್ಟಿ ಗ್ರಹಪ್ರವೇಶ ನಡೆಸಿದ 
ನೀರಲ್ಲಿ ಕಣಪಡೆ ಹಾಲನ್ನು ಹಾಕಿ ಮೀನು ಹಿಡಿದ 
ಗೆಳೆಯನ ಅಚ್ಚಳಿಯದ ನೆನಪು 
  
ಮದುವೆಯ ಅಲ್ಬಂನ ಪುಟಗಳನ್ನು ಸವರುವಾಗ
ಮನೆಯ ಹಿತ್ತಲಿನ ಆಳೆತ್ತರದ ಮಾವಿನ ಮರ ಹತ್ತಿ 
ಕೊಂಬೆಯ ತುದಿಯಲ್ಲಿ ಹಕ್ಕಿಯ ಗೂಡಿನ ಪಕ್ಕ ಬಣ್ಯನಿಗೆಗೆ ಹಿಡಿದಿದ್ದ 
ಜೇನು ಗೂಡನ್ನು ತೆಗೆಯಲು ಜೇನ್ ನೊಣಗಳಿಂದ ಕಚ್ಚಿಸಿಕೊಂಡು 
ಜೇನ್ ಹನಿ ಸವಿಸಿದ ನಮ್ಮ ಕೆಲಸದಾಳು ಮುತ್ತಪ್ಪನ ನೆನಪು

ಅಲ್ಬಂನ ಪುಟಗಳನ್ನು ಗ್ರಹಿಸುವಾಗ  ನನಗನಿಸುತ್ತದೆ
ನನ್ನ ಮನಸ್ಸಿನಲ್ಲಿ ಯಾರೂ ಇಲ್ಲ...  ಎಂದು ಹೇಳುತ್ತಾ... 
ಒಳಗೊಳಗೇ ಇಷ್ಟ್ಟ ಪಟ್ಟು ಯಾರಿಗೂ ಹೇಳುವಂತಿಲ್ಲ. ಗೊತ್ತಾಗಬಾರದೆಂದು 
ಪ್ರೀತಿಯನ್ನು ಮನಸ್ಸಿನಲ್ಲೇ ಬಚ್ಚಿಟ್ಟು ನನ್ನ ಕವಿತೆಗಳಿಗೆ ಸ್ಪೂರ್ತಿಯಾಗಿದ್ದ 
ಅವಳು... ಇರಬೇಕಿತ್ತು.

ಅಲ್ಬಂನ ಎಲ್ಲಾ ಪುಟಗಳು ಮುಗಿದರೂ 
ತಾನಿಲ್ಲವಲ್ಲ ಎಂಬ ದುಗುಡ ನನ್ನ ಮಗಳು ಸಾಹಿತ್ಯಳದು 
ಕೆಲಸಕ್ಕೆ ಬಾರದ ಅಲ್ಬಂನ್ನು ತಡಕಾಡುತ್ತಿದ್ದೇನೆ ಎಂಬ ಸಿಡಿಮಿಡಿ ಹೆಂಡತಿಯದ್ದು 
ಕೆಲವರಿಲ್ಲವಲ್ಲಾ... ಎಂಬ ಕೊರಗು ನನ್ನದು.






ಶುಕ್ರವಾರ, ಆಗಸ್ಟ್ 9, 2013

ತಲ್ಲಣ


ಖಾಲಿಯಾಗಿವೆ ಸಿಗಾರು ಪ್ಯಾಕೆಟುಗಳು
ಕಳೆದು ಹೋಗಿದೆ ನಿದ್ದೆ ಇಲ್ಲದ ರಾತ್ರಿಗಳು
ಊಟ ಸೇರದ ಸಮಯಗಳು
ಈ  ಸೌಮ್ಯ ವರ್ಣ ಸಂಯೋಜನೆ
ರೂಪಲಾಲಿತ್ಯದ ಸೊಬಗಿಗೆ
ನನ್ನ ಒಂದು ಕಣ್ಣಂಚಿನ ನೋಟ ತಾಕಲು
ಪುಟ್ಟ ಹ್ರದಯ ಮುಟ್ಟಲು
ಮೂಡಿದ ಕುಂಚದ ಕಲಾ ಕುಸುಮಗೆ.


ಚಿತ್ರ ಕೃಪೆ: ಅಂತರ್ಜಾಲ
ಈಗ ಅವನ  ಕೈ ಬೆರಳುಗಳು ಚಿತ್ರ ಬರೆಯುತ್ತಿಲ್ಲ
ಮೆದುಳು ಯೋಚಿಸುತ್ತಿಲ್ಲ
ಹ್ರದಯ ಮಿಡಿಯುತ್ತಿಲ್ಲ
ಮುಖದಲ್ಲಿ ಬೆಳೆದ ಕುರುಚಲು ಗಡ್ಡ
ಕೊಳಕು ಬಟ್ಟೆ, ಉದ್ದುದ್ದ ಉಗುರುಗಳು,
ಸ್ವಾಧೀನ ಕಳೆದುಕೊಂಡ ಬುದ್ಧಿ

ಎಲ್ಲ ಬಂಧಗಳು ಕಳಚಿ ದೂರವಾಗಿ ಬಿಟ್ಟಿವೆ  
ಅವನಿಗೆ ವೈದ್ಯೆಯಾಗಿ ಉತ್ಸುಕತೆಯಿಂದ ಕಾಯುತ್ತಿರುವೆ              
ಚಡಪಡಿಸುತ್ತೇನೆ, ಉದ್ವಿಗ್ನಳಾಗಿ ಶತಪಥ ಹಾಕುತ್ತೇನೆ. ನನ್ನ ಹಿತೈಷಿಯಾಗಿ, ಅಭಿಮಾನಿಯಾಗಿ
ಒಮ್ಮೆ ನನ್ನ ಗುರುತಿಸಬೇಕು
ಬರೆಯಬೇಕು ಇಂತಹ ಒಂದೇ ಒಂದು ಕಲಾಕ್ರತಿ 
ನನಗಾಗಿ...   

ಗುರುವಾರ, ಆಗಸ್ಟ್ 1, 2013

ಸ್ನಿಗ್ಧ ಸೌಂದರ್ಯ


  ಹೊರಗೆ ಕುಳಿತು ಲ್ಯಾಪ್ ಟಾಪ್ನ ಕೀಲಿ ಮಣೆಯ ಮೇಲೆ ಕೈ ಇಟ್ಟು ಏನನ್ನೋ ಯೋಚಿಸುತ್ತಿದ್ದೆ. ಒಳಗೆ ಮಗು ಅಳುತ್ತಿರುವ ಧ್ವನಿ ಕೇಳಿ ಒಮ್ಮೆಲೆ ವಾಸ್ತವಕ್ಕೆ ಬಂದೆ. ಹೊರಗೆ ಕುಳಿತು ಏನೋ ಮಾಡ್ತಿದ್ದೀಯ..? ಸ್ವಲ್ಪ ಮಗುವಿನೊಂದಿಗೆ ಇರ್ಲಿಕ್ಕಾಗೊಲ್ವ..?
ಅಮ್ಮ ನನ್ನನ್ನು ಗದರಿದ ಧ್ವನಿ. ಒಳಗೆ ಮಗಳು ಸಾಹಿತ್ಯ ಸೋಫದ ಮೇಲಿಂದ ಬಿದ್ದು ಗಾಯ ಮಾಡಿಕೊಂಡ್ಡಿದ್ದಳು. ಮಗಳನ್ನು ಸಮಧಾನಪಡಿಸುತ್ತಾ ಕುಳಿತ್ತಿದ್ದವನಿಗೆ ಟಿ.ವಿ. ಯಲ್ಲಿ ಸೊಸೆ ಎಂಬ ಹೆಸರಿನಲ್ಲಿ ಧಾರವಾಹಿ ಇನ್ನೇನೋ ಶುರುವಾಗುವುದರಲ್ಲಿತ್ತು ಚಾನಲ್ ಬದಲಾಯಿಸಲು ರಿಮೋಟ್ ಎತ್ತಿಕೊಳ್ಳುತ್ತಿರುವಾಗಲೇ ಸೌಂದರ್ಯ ಕ್ರಿಯೇಷನ್ಸ್ ಎಂಬ ಶಿರ್ಷಿಕೆಯೊಂದಿಗೆ ಸೌಂದರ್ಯರ ಭಾವಚಿತ್ರ ಮೂಡಿತು. ಒಂದು ಕ್ಷಣ ಅಲ್ಲೇ ನಿಂತು  ಬಿಟ್ಟೆ. ಸೌಂದರ್ಯ ನೆನಪಿಗಾಗಿ  ಅವರ ಪತಿ ರಘು ನಿರ್ಮಾಣದ  ಧಾರವಾಹಿ  ಅದು..!




                     ಹೌದು ನಾನು ನಟಿ ಸೌಂದರ್ಯರ ದೊಡ್ಡ ಅಭಿಮಾನಿ. ಅಂದು ಏಪ್ರಿಲ್ ೧೭ ೨೦೦೪ರಲ್ಲಿ ನಮ್ಮ ಅಡಿಟ್ ಟೀಮು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಅಡಿಟ್ ಮಾಡುತ್ತಿತ್ತು . ಅಲ್ಲಿಯ ಲೆಕ್ಕಿಗರೊಬ್ಬರು ಕೊಟ್ಟ ಚಾಕಲೇಟನ್ನು ಬಾಯಲ್ಲಿ ಹಾಕಿ ಸವಿಯನ್ನು ಅನುಭವಿಸುತ್ತಾ ನಾನೂ ಅಡಿಟ್ ಮಾಡುತ್ತಿದ್ದೆ . ಯಾರೋ ಒಬ್ಬರು ಸೌಂದರ್ಯ ವಿಮಾನ ಅಪಘಾತದಲ್ಲಿ ತೀರಿಕೊಂಡರು ಎಂದು ಹೇಳಿದರು. ಸಮುದ್ರದ ತೆರೆಗಳು ಒಮ್ಮೆಲೇ ನನ್ನನ್ನು ಕೊಚ್ಚಿ ಕೊಂಡೋದಾಗಾಯಿತು. ಬಾಯಲ್ಲಿ ಹಾಕಿದ ಚಾಕಲೇಟ್ ಗಂಟಲಲ್ಲೇಸಿಕ್ಕಿಕೊಂಡಿತು. ತುಂಬಾ ಹೊತ್ತು ಮೌನವಾದೆ. ಕೆಲಸ ಮಾಡಲು ಮನಸ್ಸಾಗಲಿಲ್ಲ. ಬಾಸ್ ಗೆ ಏನೋ ಸಬೂಬು ಹೇಳಿ ಸೀದಾ ಮನೆ ಕಡೆಗೆ  ಪ್ರಯಾಣ ಬೆಳೆಸಿದೆ.  



         ಮನೆಯ ಗೋಡೆಯಲ್ಲಿ ನಾನು ಖರೀದಿಸಿದ ದೊಡ್ಡ ಗಾತ್ರದ ಸೌಂದರ್ಯರ ಭಾವಚಿತ್ರ ಏಕೋ ಮಂಕಾಗಿತ್ತು. ಮನೆಗೆ ಬಂದ ಅತಿಥಿಗಳಿಗೆ ನಾನು ಸೌಂದರ್ಯ ಅಭಿಮಾನಿ ಎಂದು ಭಾವಚಿತ್ರ ತೋರಿಸುವುದೇ ಒಂದು ಖುಷಿ. ಬಹಳ ಸಲ ನನ್ನ ಇಷ್ಟಪಟ್ಟ  ಹುಡುಗಿಗೆ ಸೌಂದರ್ಯರನ್ನು ರೂಪಕ ಎಂಬಂತೆ ಹೋಲಿಸುತ್ತಿದ್ದೆ. ಸೌಂದರ್ಯರ ಹುಣ್ಣಿಮೆ ಚಂದ್ರನಂತಹ ಮುಖ, ಮುಗ್ಧ ನಗು, ಗಿಣಿಯಂತಹ ಮಾತುಗಳು, ಬೆಣ್ಣೆ ಮುದ್ದೆಯಂತಹ ಮನಸ್ಸು. ನನಗೆ ತುಂಬ ಇಷ್ಟವಾಗಿತ್ತು. ಸೌಂದರ್ಯ ಮಿತ ಬಾಷಿ.ಸೌಂದರ್ಯರಿಗೆ ಅಹಂ ಇರಲಿಲ್ಲ. ಬಣ್ಣಗಳಿಂದ ಚಿತ್ರ ಬಿಡಿಸುವುದೆಂದರೆ, ರಂಗೋಲಿ ಚಿತ್ರಿಸುವುದೆಂದರೆ, ರಂಗೋಲಿ ಸ್ಪರ್ದೆ ಏರ್ಪಡಿಸಿ ಅದರಲ್ಲಿ ಭಾಗವಹಿಸುವುದೆಂದರೆ ತುಂಬಾ ಇಷ್ಟ. ಸ್ಪರ್ಧೆಗಳಲ್ಲಿ ಎಂದಿಗೂ ತಾವೇ  ಗೆಲ್ಲಬೇಕೆಂದುಕೊಂಡವರಲ್ಲ. ಇನ್ನೊಬ್ಬರ ಯಶಸ್ಸಿನಲ್ಲಿ ತಮ್ಮ ಗೆಲುವನ್ನು ಕಂಡು ಕೊಂಡವರು. ಇದೇ ಅವರನ್ನು ಮುಂದೆ ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ಯಿತು.
       ಸೌಂದರ್ಯ ಡಾಕ್ಟರ್  ಆಗಬೇಕೆಂದು ಕನಸು ಕಂಡವರು. ತಮ್ಮ ಬಾಲ್ಯದ ದಿನಗಳಲ್ಲಿ ಡಾಕ್ಟರ್ ತರಹ  ಡ್ರೆಸ್ ಮಾಡಿ ನಟಿಸುತ್ತಿದ್ದರು.  ತಮ್ಮ ಎಮ್.ಬಿ.ಬಿ.ಎಸ್. ಪದವಿಯನ್ನು ಪಡೆಯ ಬೇಕೆಂದುಕೊಂಡಿದ್ದ ಅವರು ಓದನ್ನು  ಅರ್ಧಕ್ಕೆ ಮೊಟಕುಗೊಳಿಸಿ ಆಕಸ್ಮಿಕವಾಗಿ ಸಿನೆಮ ರಂಗಕ್ಕೆ ಕಾಲಿಟ್ಟರು. ಪಂಚ ಭಾಷ ತಾರೆಯಾಗಿದ್ದ ಅವರು ತಮ್ಮ ಸಿನಮ ಜೀವನದ ನೂರಕ್ಕೂ ಅಧಿಕ  ಚಿತ್ರಗಳಲ್ಲಿ ಬಹು ಪಾಲು ತೆಲುಗು ಸಿನೆಮಾಗಳಲ್ಲಿ ನಟಿಸಿದ್ದರು. ಆದುದರಿಂದಲೇ ಆಂಧ್ರದಲ್ಲಿ ಮನೆ, ಮನ ಮಾನಸವಾಗಿದ್ದರು.
             
  ಕಲೆಯೇ ಜೀವನ ಎಂದು ಕೊಂಡ್ಡಿದ್ದವರು ಸೌಂದರ್ಯ. ‘ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ’ ಎಂದು ಎಲ್ಲೋ ಓದಿದ ನೆನಪು ಅದು ಸೌಂದರ್ಯ ಪಾಲಿಗೆ ನಿಜವಾಗಿತ್ತು.ಕ್ಲಿಷ್ಟಕರವಾದ ಪಾತ್ರವನ್ನು ಅಷ್ಟೇ ಅಮೋಘವಾಗಿ ನಿರ್ವಹಿಸುತ್ತಿದ್ದರು.'ಆಪ್ತಮಿತ್ರ' ಸಿನೆಮದ ನಾಗವಲ್ಲಿಯ ಪಾತ್ರವಂತು ಜನರ ಮನಸ್ಸಿನಲ್ಲಿ ಅಚ್ಛಲಿಯದೆ ಉಳಿದಿದೆ.  ಕ್ರಿಯೇಟಿವ್ ನಿರ್ದೇಶನದ ಬಗ್ಗೆ ಆಸಕ್ತಿ ಹೊಂದಿದ್ದರು. ಸೌಂದರ್ಯ ಬೆಂಗಳೂರಿಗೆ ಬರುತ್ತಿದ್ದಾಗ ತೆಲುಗಿನಲ್ಲಿ ತಾನು ನಟಿಸಿದ್ದ ಚಿತ್ರವನ್ನು ತನ್ನ ಕಾಲೇಜು ಸ್ನೇಹಿತರ ಜೊತೆ ವೀಕ್ಷಿಸುತ್ತಿದ್ದರು. ಆಗ ಅವರಿಗೆ ಸ್ನೇಹಿತರು ಮಾಡುತ್ತಿದ್ದ ಕಾಮೆಂಟ್ಸ್ ತುಂಬಾ ಸಂತೋಷವನ್ನುಂಟು ಮಾಡುತಿತ್ತು. ಜನನಿಬಿಡ ಪ್ರದೇಶಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸುತ್ತುವುದೆಂದರೆ ಎಲ್ಲಿಲ್ಲದ ಖುಷಿ.
   ಯಾವಾಗಳೂ ಶೂಟಿಂಗ್ ನಲ್ಲಿ ಬ್ಯುಸಿಯಾಗುರುತ್ತಿದ್ದ ಸೌಂದರ್ಯ ಒಂದು ದಿನ ತನ್ನ ಡೈರೆಕ್ಟರಲ್ಲಿ ರಿಕ್ವೆಸ್ಟ್ ಮಾಡಿ ತನ್ನ ಪತಿ ಕೆಲಸ ಮಾಡುತ್ತಿದ್ದ ಕಂಪೆನಿಯ ಹೊರಗೆ ನಿಂತು ಪತಿಗೆ ಕರೆ ಮಾಡಿದ್ದಾರೆ.ಸೂರ್ಯ ತನ್ನ ಹಗಲಿನ ಆಟವನ್ನು ಮುಗಿಸಿದ್ದ.  ಚಂದ್ರ ಮುಗುಳ್ ನಗು ಬೀರುತ್ತಾ ಇನ್ನೇನು ಆಟ ಆರಂಬಿಸಿದ್ದ. ಮಹಡಿಯ ಮೇಲೆ ಕೆಲಸದಲ್ಲಿ ಬ್ಯುಸಿಯಾಗಿದ್ದ ರಘುರನ್ನು  ಕಿಟಕಿಯ ಬಳಿ ಬರ ಹೇಳಿದ್ದಾರೆ. ಸೌಂದರ್ಯ ತಮಾಷೆ ಮಾಡುತಿದ್ದಾರೇನೋ ಎಂದು ಕೊಂಡ ರಘು ಕೋಪಗೊಂಡರೂ ತೋರ್ಪಡಿಸದೆ ಕಿಟಕಿಯ ಬಳಿ ಬಂದಿದ್ದಾರೆ. ಏನ್ ಆಶ್ಚರ್ಯ…! ನೋಡಿದರೆ ಸೌಂದರ್ಯ..!! ಹುಟ್ಟು ಹಬ್ಬದ ಶುಭಾಶಯ ಹೇಳುವಾಗ ಖುಷಿ ಪಡುವ ಸರದಿ ರಘುವವರದಾಗಿತ್ತು. ಸೌಂದರ್ಯ ಶೂಟಿಂಗ್  ಸಮಯದಲ್ಲಿ ಕಲಾವಿದೆಯಾಗಿದ್ದರೆ , ಮನೆಯಲ್ಲಿ ಪಕ್ಕಾ ಗ್ರಹಿಣಿಯಾಗಿದ್ದರು.
                               

  ಆ ದಿನ ನಾನು ಸೌಂದರ್ಯರನ್ನು ಭೇಟಿಯಾದೆ. ಎಷ್ಟು ಖುಷಿ ಪಟ್ಟೆನೆಂದರೆ, ಅದನ್ನು ವರ್ಣಿಸಲಸಾಧ್ಯವಾಗಿತ್ತು. ಅವರು ನನ್ನಲ್ಲಿ ಸಂತೋಷದಿಂದ ಮಾತಾಡಿಸುತ್ತಿದ್ದರು. ಅವರ ಒಟ್ಟಿಗೆ ನಿಂತು ಫೊಟೊ ತೆಗಿಸಿಯೂ ಆಯಿತು. ಅವರು ಶೂಟಿಂಗಲ್ಲಿ ಬ್ಯುಸಿಯಾಗಿದ್ದರಿಂದ ಬಹಳ ಹೊತ್ತು ನಾನು ಅಲ್ಲೇ  ಇದ್ದೆ. ಬೆಕ್ಕುಗಳು ಜಗಳವಾಡುವ ಕರ್ಕಶ ಧ್ವನಿ.....! ಒಮ್ಮೇಲೆ ಬೆಚ್ಚಿ ಬಿದ್ದು ಎಚ್ಚರಗೊಂಡೆ. ಮಲಗಿದ್ದಲ್ಲಿಂದಲೇ ಗಡಿಯಾರ ನೋಡಿದೆ. ರಾತ್ರಿ ಎರಡು ಗಂಟೆಯಾಗಿತ್ತು.  ನಾನು ಕಂಡದ್ದು ಕನಸಾಗಿತ್ತು.  ತುಂಬಾ  ನಿರಾಶನಾಗಿದ್ದೆ.  
    ಸೌಂದರ್ಯ ತಮ್ಮ ಹುಟ್ಟೂರು ಕೋಲಾರದ ಕುಲಗುಂಟೆಯಲ್ಲಿ ಮದುವೆಯಾಗುವ ಬಡ ಹೆಣ್ಣು ಮಕ್ಕಳಿಗೆ ಹಣದ ಸಹಾಯ ಮಾಡುತ್ತಿದ್ದರು. ದೇಶದ ಜನರಿಗೆ ಯಾವುದಾದರೂ ರೀತಿಯಿಂದ ಸಹಾಯ ಮಾಡಬೇಕೆಂದುಕೊಂಡಿದ್ದರು. ಆದರೆ ಎಲ್ಲರಿಂದ ಬಹು ಬೇಗ ಮರೆಯಾಗಿ ಬಿಟ್ಟರು.ತಮ್ಮ ೨೬ನೆಯ ವಯಸ್ಸಿನಲ್ಲಿಯೇ ಉಯಿಲ್ ಒಂದನ್ನು ಬರೆದಿಟ್ಟ ಸೌಂದರ್ಯ ತಮ್ಮ ಮರಣ ನಂತರ ತಮ್ಮ ಸಂಸಾರದ ಎಲ್ಲರೂ ಸುಖ ಸಂತೋಷದಿಂದ ಬದುಕಬೇಕೆಂದು ಕೊಂಡಿದ್ದರು. ಆದರೆ ಇತ್ತೀಚೆಗೆ ಸೌಂದರ್ಯ ಕುಟುಂಬ ಆಸ್ತಿಗಾಗಿ ಮಾಡಿದ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ಸೌಂದರ್ಯ ಆತ್ಮ ಎಷ್ಟು ನೊಂದು ಕೂಂಡಿರಬಹುದಲ್ವ…..?