ಸೋಮವಾರ, ಆಗಸ್ಟ್ 12, 2013

ನನ್ನ ಮದುವೆಯ ಅಲ್ಬಮ್


ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿಸಿದ್ದ
ನನ್ನ ಮದುವೆಯ ಅಲ್ಬಮ್ ತೆಗೆಯುವಾಗ ನನಗನಿಸುತ್ತದೆ
ಖಾಕಿ ಶರ್ಟು ದೊಡ್ಡ ಮುಂಡಾಸಿನ
ರಾತ್ರಿ ಹೊರಗಡೆ ಮಲಗಿದ್ದಾಗ ಹುಲಿಯೊಂದು ಹಾದು ಹೋಗಿ
ಹತ್ತಿರವಿದ್ದ ನಾಯಿ ಹೆದರಿ ಚಾಪೆಯಲ್ಲೆಲ್ಲಾ ಹೇಸಿಗೆ ಮಾಡಿದ
ಕಥೆ ಹೇಳುತಿದ್ದ ನನ್ನಜ್ಜ ಇರಬೇಕಿತ್ತು

ಮದುವೆಯ ಅಲ್ಬಂನ ಪುಟ ತಿರುವಿದಾಗ  ತಂಗಿ
ನನ್ನ ಮದುವೆಗೆ ಯಾವ ಬಣ್ಣದ ಡ್ರೆಸ್ ತೊಡಲಿ..?
ಸೀರೆ ಉಟ್ಟುಕೊಳ್ಳಲೋ...? ಚೂಡಿದಾರ್ ಹಾಕಿಕೊಳ್ಳಲೋ...?
ಎಂದು ಕನ್ಫ್ಯೂಸನ್ ನಲ್ಲಿ ಮುಳುಗಿ ಕೊನೆಗೆ ಗೆಳೆಯರೊಂದಿಗೆ ಚರ್ಚಿಸಿ 
ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ ಸುಂದರ ನೆನಪು 

ಮದುವೆಯ ಅಲ್ಬಂನ ಫೋಟೋಗಳನ್ನು ನೋಡುವಾಗ 
ಬಾಲ್ಯದಲ್ಲಿ ನನ್ನೊಂದಿಗೆ ಹುಡುಗಿ ವೇಷ ಹಾಕಿ ನಾಟಕವಾಡಿದ,
ಕುಂಟಾಲ್ ಗಿಡಗಳಿಂದ ಮನೆಕಟ್ಟಿ ಗ್ರಹಪ್ರವೇಶ ನಡೆಸಿದ 
ನೀರಲ್ಲಿ ಕಣಪಡೆ ಹಾಲನ್ನು ಹಾಕಿ ಮೀನು ಹಿಡಿದ 
ಗೆಳೆಯನ ಅಚ್ಚಳಿಯದ ನೆನಪು 
  
ಮದುವೆಯ ಅಲ್ಬಂನ ಪುಟಗಳನ್ನು ಸವರುವಾಗ
ಮನೆಯ ಹಿತ್ತಲಿನ ಆಳೆತ್ತರದ ಮಾವಿನ ಮರ ಹತ್ತಿ 
ಕೊಂಬೆಯ ತುದಿಯಲ್ಲಿ ಹಕ್ಕಿಯ ಗೂಡಿನ ಪಕ್ಕ ಬಣ್ಯನಿಗೆಗೆ ಹಿಡಿದಿದ್ದ 
ಜೇನು ಗೂಡನ್ನು ತೆಗೆಯಲು ಜೇನ್ ನೊಣಗಳಿಂದ ಕಚ್ಚಿಸಿಕೊಂಡು 
ಜೇನ್ ಹನಿ ಸವಿಸಿದ ನಮ್ಮ ಕೆಲಸದಾಳು ಮುತ್ತಪ್ಪನ ನೆನಪು

ಅಲ್ಬಂನ ಪುಟಗಳನ್ನು ಗ್ರಹಿಸುವಾಗ  ನನಗನಿಸುತ್ತದೆ
ನನ್ನ ಮನಸ್ಸಿನಲ್ಲಿ ಯಾರೂ ಇಲ್ಲ...  ಎಂದು ಹೇಳುತ್ತಾ... 
ಒಳಗೊಳಗೇ ಇಷ್ಟ್ಟ ಪಟ್ಟು ಯಾರಿಗೂ ಹೇಳುವಂತಿಲ್ಲ. ಗೊತ್ತಾಗಬಾರದೆಂದು 
ಪ್ರೀತಿಯನ್ನು ಮನಸ್ಸಿನಲ್ಲೇ ಬಚ್ಚಿಟ್ಟು ನನ್ನ ಕವಿತೆಗಳಿಗೆ ಸ್ಪೂರ್ತಿಯಾಗಿದ್ದ 
ಅವಳು... ಇರಬೇಕಿತ್ತು.

ಅಲ್ಬಂನ ಎಲ್ಲಾ ಪುಟಗಳು ಮುಗಿದರೂ 
ತಾನಿಲ್ಲವಲ್ಲ ಎಂಬ ದುಗುಡ ನನ್ನ ಮಗಳು ಸಾಹಿತ್ಯಳದು 
ಕೆಲಸಕ್ಕೆ ಬಾರದ ಅಲ್ಬಂನ್ನು ತಡಕಾಡುತ್ತಿದ್ದೇನೆ ಎಂಬ ಸಿಡಿಮಿಡಿ ಹೆಂಡತಿಯದ್ದು 
ಕೆಲವರಿಲ್ಲವಲ್ಲಾ... ಎಂಬ ಕೊರಗು ನನ್ನದು.


5 ಕಾಮೆಂಟ್‌ಗಳು:

 1. ಚಂದ ಇದೆ ನಿಮ್ಮ ನೆನಪಿನಂಗಳದ ಆಲ್ಬಮ್ ಹುಡುಕಾಟ ....

  ಪ್ರತ್ಯುತ್ತರಅಳಿಸಿ
 2. ಧನ್ಯವಾದಗಳು: @ ಮೌನರಾಗ

  ತುಂಬಾ ಸಂತೋಷ ದಿನಕರ್ ಮೊಗೇರರೆ. ಖಂಡಿತವಾಗಿ ನಿಮ್ಮ ಮದುವೆಯ ಅಲ್ಬಂನ್ನು ನೋಡಿ.ಈ ಸಲ ನೋಡುವಾಗ ತುಂಬಾ ಸುಂದರವಾಗಿರುತ್ತೆ.

  ಪ್ರತ್ಯುತ್ತರಅಳಿಸಿ
 3. ನಿಮ್ಮ ಸಾಲುಗಳನ್ನು ಓದಿದ ಮೇಲೆ ಅರೆ , ಹೌದಲ್ಲ ಎನಿಸಿ , ಅವರೆಲ್ಲಾ ನೆನಪಾದರು. ಚಂದದ ಸಾಲುಗಳು

  ಪ್ರತ್ಯುತ್ತರಅಳಿಸಿ
 4. ತುಂಬಾ ಚೆನ್ನಾಗಿದೆ ನೆನಪಿನ ಆಲ್ಬಂ :-)

  ಪ್ರತ್ಯುತ್ತರಅಳಿಸಿ