ನನ್ನ ಕಾಲೇಜು ಮನೆಯಿಂದ ತುಂಬಾ ದೂರ ಇದ್ದುದರಿಂದ ನಾನು ಅನಿವಾರ್ಯವಾಗಿ ಹಾಸ್ಟೇಲ್ ನಲ್ಲಿ ಉಳಿದುಕೊಂಡು ಕ್ಲಾಸಿಗೆ ಹೋಗುವ ಸಂದರ್ಭವೊಂದು ನನ್ನ ಜೀವನದಲ್ಲಿ ಒದಗಿ ಬಂತು. ಹಾಸ್ಟೇಲ್ ಆಫೀಸು ಪ್ರವೇಶಿಸಿ, ಅಪ್ಲಿಕೇಶನ್ ತುಂಬಿಸಿ, ಅದಕ್ಕೆ ನನ್ನ ಭಾವಚಿತ್ರ ಅಂಟಿಸಿ, ಆ ರೂಮ್ ಗೆ ಹೋಗಿ ಅಲ್ಲಿ ರಸೀದಿ ಮಾಡಿಸಿ ದುಡ್ಡು ಕಟ್ಟಿ ಬನ್ನಿ, ಸ್ವಲ್ಪನಿಲ್ಲಿ, ಸ್ವಲ್ಪ ಕುಳಿತು ಕೊಳ್ಳಿ, ಸ್ವಲ್ಪ ಕಾಯಿರಿ ಎಂದು ಓಡಾಡಿಸಿ, ಕಾಯಿಸಿ, ಕೊನೆಗೂ ಹಾಸ್ಟೇಲ್ ಪ್ರವೇಶ ಪಡೆದುಕೊಂಡೆ.
ಹಾಸ್ಟೆಲ್ ನಲ್ಲೇ ಉಳಿದುಕೊಳ್ಳಲು ನಾನು ಅಣಿಯಾದಾಗ ಕೆಲವರು ಕಣ್ಣೀರು ಹಾಕಿದರು, ಕೆಲವರು ಕಣ್ಣೀರು ಹಾಕಿಸಿದರು, ಕೆಲವರು ಹೆದರಿಸಿದರು. ಅಲ್ಲಿಂದ ಇಲ್ಲಿಂದ ಎಲ್ಲೆಲ್ಲಿಂದಲೂ ಫೋನುಗಳು, ಮನೆಗೆ ಬಂದು ಹೋಗುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಸಲಹೆಗಳು, ಸೂಚನೆಗಳು, ಉಪದೇಶಗಳು, ಶುಭಾಶಯಗಳು, ಸ್ನೇಹಿತರು, ಬಂಧುಗಳು, ಹಿತೈಷಿಗಳು, ಇಂಥ ಸಹೃದಯಿಗಳ ಪಡೆ ಹೆಚ್ಚಲಿ ಎಂದು ಕೊಂಡೆ.
ಹಾಸ್ಟೇಲ್ ನಲ್ಲಿ ನನ್ನ ಮೊದಲ ದಿನದಂದು ಸಂಜೆ ನನ್ನ ರೂಮ್ ಮೇಟ್ ಗಳೊಂದಿಗೆ ಮಾತನಾಡುತ್ತಾ, ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿರುವಾಗಲೇ ಆ ರೂಮ್ ನಿಂದ, ಈ ರೂಮ್ ನಿಂದ, ಮತ್ತೊಂದು ರೂಮ್ ನಿಂದ, ಮೇಲಿನ ರೂಮ್ ನಿಂದ, ಕೆಳಗಿನ ರೂಮ್ ನಿಂದ, ಎಲ್ಲಾ ರೂಮ್ ಗಳಿಂದಲೂ ನಮ್ಮ ಸೀನಿಯರ್ ಎನಿಸಿಕೊಂಡವರು ಪರಿಚಯ ಮಾಡಿಸುವ ಕಾರಣ ಹೇಳಿ ನಮ್ಮ ರೂಮ್ ಗಳಿಗೆ ಬಂದು ಹೋಗಲು ಶುರುವಿಟ್ಟುಕೊಂಡರು. ಪರಿಚಯ ಮಾಡಿಸಲು ಬಂದವರು ಹಾಡು ಹೇಳಿಸುವುದು, ಡ್ಯಾನ್ಸ್ ಮಾಡಿಸುವುದು, ಪ್ರಶ್ನೆಗಳನ್ನು ಕೇಳುವುದು, ಒಗಟು ಬಿಡಿಸಲು ಹೇಳುವುದು, ಕೆಲವೊಮ್ಮೆ ಗದರಿಸುವುದು, ನಗಿಸುವುದು, ಹೇರ್ ಕಟ್ಟಿಂಗನ್ನು ನೋಡಿ ಹೀಯಾಳಿಸುವುದು, ಹೀಗೆ ಕೀಟಲೆಗಳನ್ನು ಕೊಡುತ್ತಲೇ ಇದ್ದರು. ನಾನಂತು ಕಂಗಾಲಾಗಿ ಹೋದೆ. ರಾತ್ರಿ ಗಂಟೆ ಹತ್ತಾಗಿರಬಹುದು ಒಮ್ಮೆ ನಮ್ಮ ರೂಮ್ ಗೆ ಬಂದವರೆಲ್ಲರೂ ಹೊರಗೆ ಹೋಗಿ ನಾವು ಮೂವರು ಮಾತ್ರ ಉಳಿದುಕೊಂಡೆವು. ಕೂಡಲೇ ನಾನು ಹೋಗಿ ನಮ್ಮ ರೂಮ್ ನ ಬಾಗಿಲು ಹಾಕಿ ಭದ್ರಪಡಿಸಿದೆ. ನನ್ನ ಒಬ್ಬ ರೂಮ್ ಮೇಟ್ ಹೋಗಿ ಲೈಟ್ ಆರಿಸಿದ ಮೂವರೂ ಕತ್ತಲೆಯಲ್ಲಿ ಕುಳಿತುಕೊಂಡು ಪಿಸ ಪಿಸ ಮಾತಾಡುತ್ತಾ, ಇನ್ನು ಬಾಗಿಲು ತೆರೆಯುವುದೇ ಬೇಡ ಎಂದುಕೊಳ್ಳುತ್ತಿರುವಾಗಲೇ ಸ್ವಲ್ಪ ತಮಾಷೆಯ ಮನುಷ್ಯನಾದ ನನ್ನ ಒಬ್ಬ ರೂಮ್ ಮೇಟ್ ಗೆ ಮೂತ್ರ ಬಂದು ಬಿಡಬೇಕೆ ? ರೂಮ್ ನ ಬಾಗಿಲು ತೆರೆದರೆ ಕಷ್ಟ. ತೆಗೆಯದಿದ್ದರೆ ರೂಮ್ ಮೇಟ್ ಗೆ ಉಚ್ಚೆ ಹೊಯ್ಯಲು ಕಷ್ಟ. ಆಚೆ ಈಚೆ ನೋಡಿದ ನನ್ನ ರೂಮ್ ಮೇಟ್ ರೂಮ್ ನ ಕಿಟಕಿಯನ್ನು ಏರಿಯೇ ಬಿಟ್ಟ. ನೋಡ ನೋಡುತ್ತಲೇ ಕಿಟಕಿಯಿಂದ ಹೊರಗೆ ಉಚ್ಚೆ ಹೊಯ್ದು ಬಿಟ್ಟ. ನಾನು ಮತ್ತು ನನ್ನ ಇನ್ನೊಬ್ಬ ರೂಮ್ ಮೇಟ್ ಶಬ್ಧ ಬರದಂತೆ ಬಾಯಿಗೆ ಕೈ ಹಿಡಿದು ನಗುತ್ತಿದ್ದೆವು.
ನಾವು ಇರುತ್ತಿದ್ದ ರೂಮ್ ಕಾರ್ನರ್ ನಲ್ಲಿರುತ್ತಿದ್ದುದರಿಂದ ಎಲ್ಲರಿಗೂ ಸಹಾಯವಾಗಲೆಂದು ಒಂದು ಒಳ ಕರೆ ಮಾತ್ರ ಇರುವ ಲ್ಯಾಂಡ್ ಲೈನ್ ಫೋನನ್ನು ಗೋಡೆಗೆ ಸಿಕ್ಕಿಸಿದ್ದರು. ಫೋನ್ ರಿಸೀವ್ ಮಾಡಿದವರು ಯಾರೇ ಆಗಿದ್ದರೂ ಫೋನ್ ಯಾರಿಗೆ ಬಂದಿದೆಯೋ ಅವರ ಹೆಸರನ್ನು ಜೋರಾಗಿ ಬೊಬ್ಬೆ ಹಾಕಿ ಕರೆದು ಸಂಬಂಧಪಟ್ಟವರಿಗೆ ತಿಳಿಸಬೇಕಾಗಿತ್ತು. ಆ ಫೋನಿಗೆ ಹುಡುಗಿಯರ ಕರೆ ಬರುವುದಕ್ಕೇನೂ ಕಡಿಮೆ ಇರಲಿಲ್ಲ. ಹುಡುಗಿಯರಿಂದ ಬಂದ ಫೋನ್ ಗಳೆಂದರೆ ಹೇಳಬೇಕೆ, ನಿಂತುಕೊಂಡು ಮಾತಾಡಲು ಶುರು ಮಾಡಿದವರು ಸ್ವಲ್ಪ ಹೊತ್ತಿನ ನಂತರ ಕುಳಿತುಕೊಂಡು ಮಾತಾಡಲು ಶುರು ಮಾಡಿದರು, ಅರ್ಧ ಗಂಟೆಯ ನಂತರ ಮಲಗಿಕೊಂಡು ಮಾತಾಡುತ್ತಿದ್ದರೆ, ಕೆಲವೊಮ್ಮೆ ಮಾತಾಡುತ್ತಾ ನಗುತ್ತಿದ್ದರು, ಕ್ರಮೇಣ ನಿಮಿಷಕ್ಕೊಂದು ಮಾತು ಬಾಯಿಯಿಂದ ಹೊರ ಬರಲು ಶುರುವಾಗುತ್ತಿತ್ತು. ಕೆಲವೊಮ್ಮೆ ಜೋರಾಗಿ ಬೈಯುತ್ತಿದ್ದರು. ಹೀಗೆ ಸುಮಾರು ಎರಡು ಗಂಟೆಗಿಂತಲೂ ಹೆಚ್ಚು ಮಾತಾಡುವವರು ಇರುತ್ತಿದ್ದರು.
ಹಾಸ್ಟೇಲ್ ನಲ್ಲಿ ವಾರಕ್ಕೊಮ್ಮೆ ಪಾರ್ಟಿಯೂ ಎರಡನೆಯ ಮಹಡಿಯಲ್ಲಿ ನಡೆಯುತ್ತಿದ್ದವು. ಪಾರ್ಟಿಯಲ್ಲಿ ಬಿಯರ್ ಕುಡಿದು ಕೆಲವರು ಮಾಡುತ್ತಿದ್ದ ಹುಚ್ಚು ಡ್ಯಾನ್ಸ್ ಗಳು, ಕುಡಿದು ಹೆಚ್ಚಾಗಿ ಹಾಡು ಹೇಳುವವರು, ಬಾಟ್ಲಿ ಕೈಯಲ್ಲಿ ಹಿಡಿದುಕೊಂಡು ಮೂಲೆಯಲ್ಲಿ ಕುಳಿತು ತನ್ನಷ್ಟಕ್ಕೆ ಮಾತಾಡುತ್ತ ನಗುವವರು, ಬಿಯರ್ ಹೀರುತ್ತಾ ತಮ್ಮ ಹಳೆಯ ಲವ್ ಸ್ಟೋರಿಯನ್ನು ಹೇಳುತ್ತಾ ಅಳುವವರು, ಇವೆಲ್ಲವನ್ನೂ ನೋಡುತ್ತಾ, ಕೇಳುತ್ತಾ ಪೆಪ್ಸಿ ಬಾಟಲಿಗಳನ್ನು ಹಿಡಿದು ಅನಿವಾರ್ಯವಾಗಿ ಕುಳಿತುಕೊಳ್ಳುತ್ತಿದ್ದ ನಾನು ಮತ್ತು ನನ್ನ ಗೆಳೆಯನಾಗಿದ್ದ ರಾಘು. ಈ ಪಾರ್ಟಿಯ ಗದ್ದಲದಿಂದಾಗಿ ಬೇರೆಯವರಿಗೆ ತೊಂದರೆಯಾಗುತ್ತಿದ್ದುದರಿಂದ ಯಾರೋ ಒಮ್ಮೆ ವಾರ್ಡನ್ ಗೆ ಸುದ್ದಿ ಮುಟ್ಟಿಸಿದ್ದರು. ಇನ್ನೇನು ಒಂದನೆಯ ಮಹಡಿಯಿಂದ ಎರಡನೆ ಮಹಡಿಗೆ ವಾರ್ಡನ್ ಕಾಲಿಡುತ್ತಿದ್ದರು ಎರಡನೆಯ ಮಹಡಿಯ ವರಾಂಡದಲ್ಲಿ ಕುತ್ತಿಗೆಯನ್ನು ಬಿಲದಲ್ಲಿನ ಕೇರೆ ಹಾವು ಹಾಕಿದಂತೆ ಸರಳುಗಳ ಹೊರಗೆ ಹಾಕಿ ವಾಂತಿ ಮಾಡುತ್ತಿದ್ದ ಸಿದ್ದೇಶನನ್ನು ಯಾರೋ ಇಬ್ಬರು ಹೆಣವನ್ನು ಹಿಡಿದು ಕೊಂಡೋದಂತೆ ಕೊಂಡೋಗಿ ಅವನ ರೂಮ್ ನ ಬೆಡ್ ಮೇಲೆ ದೊಪ್ಪನೆ ಎಸೆದು ಹೋದರು. ವಾರ್ಡನ್ ಪಾರ್ಟಿ ರೂಮನ್ನು ಪ್ರವೇಶಿಸುವಾಗ ಪಾರ್ಟಿ ನಡೆಸಿದವರು ಬಿಯರ್ ಬಾಟಲಿಗಳನ್ನು ಅಡಗಿಸಿಡುವುದರಲ್ಲಿ ಯಶಸ್ಸಾದ್ದರಿಂದ ಯಾರೂ ಸಿಕ್ಕಿ ಬಿದ್ದಿರಲಿಲ್ಲ.
ಹಾಸ್ಟೇಲ್ ನಲ್ಲಿ ಒಂದು ಫ್ಲೋರಿಗೆ ಇರುತ್ತಿದ್ದುದು ಎರಡು ಬಾತ್ ರೂಮ್ ಗಳು. ಕೆಲವರು ಅದು ಯಾವ ಪರಿ ಸ್ನಾನ ಮಾಡುತ್ತಿದ್ದರೋ ? ನೀರನ್ನು ಜಲಪಾತದಂತೆ ಹರಿಯಬಿಟ್ಟು ಶಬ್ಧ ಮಾಡುತ್ತಾ, ಶಿಳ್ಳೆ ಹೊಡೆಯುತ್ತಾ, ಹಾಡು ಹೇಳುತ್ತಾ, ಕುಣಿಯುತ್ತಾ ಸರೋವದಲ್ಲಿ ಇಜಾಡಿದಂತೆ ಗಂಟೆಗಟ್ಟಲೆ ಸ್ನಾನ ಮಾಡುತ್ತಿದ್ದರು. ಇನ್ನು ಕೆಲವರು ಸಿಶ್ಯಬ್ಧವಾಗಿ ಸ್ನಾನ ಮಾಡುತ್ತಿದ್ದರು. ಅದು ಕೂಡ ಗಂಟೆ ಕಳೆಯುತ್ತಿತ್ತು. ಅಲ್ಲಿ ಅವರು ಸ್ನಾನ ಮಾಡುತ್ತಿದ್ದರೋ ಕಥೆ, ಕಾದಂಬರಿ ಏನಾದರು ಬರೆಯುತ್ತಿದ್ದರೋ ದೇವರೇ ಬಲ್ಲ.
ನನ್ನ ಹಾಸ್ಟೇಲು ಜೀವನದಲ್ಲಿ ಎಂಥೆಂತಹ ಜನರನ್ನು ನೋಡಿದ್ದೇನೆಂದರೆ, ಪಕ್ಕದ ರೂಮ್ ನಲ್ಲಿ ಮಲಗಿದ್ದವರು ಎದ್ದು ಬಂದು ಅಲರಾಮನ್ನು ಆಫ್ ಮಾಡಿದರೂ ಗೊತ್ತಿಲ್ಲದೆ ಗೊರಕೆ ಹೊಡೆಯುವವರು, ಕೆಳಗಿನ ಪ್ಲೋರಿನಲ್ಲಿ ನಿಂತು ಕೊಂಡು ಮಾತಾಡುವವರ ಮೇಲೆ ಮೇಲಿನ ಫ್ಲೋರಿನಲ್ಲಿ ನಿಂತು ಕೊಂಡು ಬಕೇಟಿನಿಂದ ನೀರನ್ನು ಸುರಿದು ಆನಂದಿಸುವವರು , ರಾತ್ರಿ ಎರಡು ಗಂಟೆಗೆ ರೂಮಲ್ಲಿ ಕುಳಿತು ಗಿಟಾರ್ ಬಾರಿಸುವವರು, ಯಾವತ್ತೂ ಓದದೆ ಪರೀಕ್ಷೆಯ ಮುಂಚಿನ ದಿವಸ ಇಡೀ ರಾತ್ರಿ ಓದುತ್ತಾ ಪ್ಯಾಕೆಟ್ ಗಟ್ಟಲೆ ಸಿಗರೇಟ್ ಖಾಲಿ ಮಾಡುವವರು. ಅಬ್ಬಾಬ್ಬ ಎಂಥ ವಿಚಿತ್ರ ಜನರು !. ನಾನು ಕೆಲವರ ರೂಮನ್ನು ಹೊಕ್ಕಾಗ ನನ್ನನ್ನು ಸ್ವಾಗತಿಸಿದ ವಸ್ತುಗಳೆಂದರೆ, ವಿವಿಧ ಬ್ರ್ಯಾಂಡಿನ ಪರ್ಫ್ಯೂಮ್ ಗಳು, ಬಗೆ ಬಗೆಯ ಕ್ರೀಮ್ ಗಳು, ಕಪಾಟಿನಲ್ಲಿನ ಬಾಡಿ ಸ್ಪ್ರೇ ಗಳು ಮತ್ತು ಗೋಡೆಯಲ್ಲಿನ ಒಂಟಿ ಕಣ್ಣು ಹೊಡೆಯುವ ಹುಡುಗಿಯ ಫೋಟೊ.
ಗಣೇಶ ಚತುರ್ಥಿಯಂದು ನಮ್ಮ ಹಾಸ್ಟೇಲಿನ ಮೆಸ್ ಹಾಲ್
ನಲ್ಲಿ ಗಣೇಶನ ಮೂರ್ತಿಯ ಪ್ರತಿಷ್ಠಾಪಿಸಿ, ಮೂರು ದಿನ ಪೂಜೆ ಮಾಡಿ ನೀರಿನಲ್ಲಿ ವಿಸರ್ಜಿಸುವ ಆಚರಣೆ
ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಇಡೀ ಮೆಸ್ ಹಾಲ್ ತಳಿರು ತೋರಣಗಳಿಂದ ಕಂಗೊಳಿಸುತಿತ್ತು.
ವಿದ್ಯುದ್ದೀಪಗಳಿಂದ, ಹೂವುಗಳಿಂದ ಅಲಂಕ್ರತವಾಗಿತ್ತು. ಅಗರ್ ಬತ್ತಿಯ ಪರಿಮಳವಂತು ಇಡೀ ಹಾಲನ್ನು ಆವರಿಸಿ, ಸುವಾಸನೆಯನ್ನು ಬೀರಿತ್ತು. ಗಣೇಶ ವಿಸರ್ಜನೆಯ ಮುಂಚಿನ
ದಿವಸ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮ ಗಣೇಶೋತ್ಸವಕ್ಕೆ ಕಳೆ ಏರಿಸಿತ್ತು. ಕೆಲವರು ಹಾಡಿದ
ಹಾಡುಗಳಲ್ಲಿ ಮುಜೆ ಕುಚ್ ಕೆಹನಾ ಹೆ...... ಗೀತೆ ಹತ್ತಿರದ ಗರ್ಲ್ಸ್ ಹಾಸ್ಟೇಲಿನ ಒಳಹೊಕ್ಕಿ ಅಲ್ಲಿನ
ಹುಡುಗಿಯರ ಕಿವಿ ಮುಟ್ಟಿತ್ತು. ಮೂರನೆಯ ದಿನ ಬೀದಿಯಲ್ಲಿ ಮೆರವಣಿಗೆಯ ಮೂಲಕ ಸಾಗಿ ಗಣಪತಿ
ವಿಸರ್ಜನೆ ಗರ್ಲ್ಸ್ ಹಾಸ್ಟೇಲ್ ನ ಪಕ್ಕವೇ ಇದ್ದುದರಿಂದ ಎಲ್ಲರ ಸಂಭ್ರಮ ಹೇಳತೀರದು. ಡೋಲು-ವಾದ್ಯ
ಕುಣಿತಗಳೊಂದಿಗೆ ಗಣಪನ ಹೊತ್ತ ಟೆಂಪೋ ಹೊರಟಿತ್ತು. ಸುತ್ತಲೂ ಪಟಾಕಿಗಳ ಸದ್ದು. ಮೆರವಣಿಗೆ ಗರ್ಲ್ಸ್ ಹಾಸ್ಟೇಲ್ ಸಮಿಪಿಸುತ್ತಿದ್ದಂತೆ
ಎಲ್ಲರ ಕುಣಿತ ಜೋರಾಗಿತ್ತು. ಸುರಿಯುತ್ತಿದ್ದ ತುಂತುರು ಮಳೆ ಕೆಲವರನ್ನು ಜನರೇಟರ್ ಶಬ್ಧಕ್ಕೂ ಕುಣಿಯುವಂತೆ ಮಾಡಿತ್ತು. ಕೆಲವರು ಬಾಯಿಗೆ ಸೀಮೆ ಎಣ್ಣೆ ಸುರಿದು ಕೈಯಲ್ಲಿದ್ದ ಬೆಂಕಿಗೆ ಊದಿ ಒಮ್ಮೆಲೇ ಬೆಂಕಿಯ ಜ್ವಾಲೆಯನ್ನು ಎಬ್ಬಿಸುತ್ತಿದ್ದರು. ಗಣಪತಿ ಬಪ್ಪ ಮೋರೆಯ ಎಂಬ ಕೂಗು ಎಲ್ಲೆಲ್ಲೂ ಕೇಳಿ ಬರುತ್ತಿತ್ತು. ಗ್ರಾಮಸ್ತರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದುದರಿಂದ ಗಣೇಶೋತ್ಸವಕ್ಕೆ ಮತ್ತೂ ಮೆರುಗನ್ನು ತಂದಿತ್ತು.