ಗುರುವಾರ, ಅಕ್ಟೋಬರ್ 31, 2013

ಮೊದಲ ಹಣತೆ ನಮ್ಮ ಮನೆಯಲ್ಲೇ ಬೆಳಗಲಿ

ನನ್ನ ನಾದಿನಿಯರು
 ಸೂರ್ಯ ಚಂದ್ರರು ಕಂತಿಹೋದಾಗ ಪುಟ್ಟದೊಂದು ಹಣತೆ ತಾನು ಬೆಳಕು ನೀಡುವೆನೆಂದು ಮುಂದೆ ಬರುತ್ತದೆ. ಬತ್ತಿಯನ್ನು ಸುಟ್ಟುಕೊಳ್ಳುತ್ತಾ ತನ್ನ ಸುತ್ತಲಿನ ಕತ್ತಲೆಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಅದರಂತೆ  ಇತರರಿಗಾಗಿ  ಬದುಕುವುದರಲ್ಲೇ  ಸಾರ್ಥಕತೆ  ಅಡಗಿದೆ. ಹಣತೆ ಬತ್ತಿಯನ್ನು ಸುಟ್ಟುಕೊಳ್ಳುವಂತೆ, ನಾವು ನಮ್ಮ ಮಿಥ್ಯಾಹಂಕಾರವನ್ನು ಸುಟ್ಟುಕೊಳ್ಳಬೇಕು. ಈ ಬೋಧೆಯನ್ನು ದೀಪಾವಳಿಯ ಹಣತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಈ ಒಳಹೂರಣವನ್ನು ಅರಿತುಕೊಂಡು ಸಹಬಾಳ್ವೆಯ ಸವಿಗೆ ದೀಪ ಹಚ್ಚೋಣ.
 


   ಅಶ್ವಯಜ ಮಾಸದ ಕೊನೆಯರ್ಧ. ಬಹುತೇಕ ಅಕ್ಟೋಬರ್ ತಿಂಗಳು. ಸಂಜೆಗತ್ತಲು ಬೇಗನೆ ಆಗಿ ಇರುಳು ದೀರ್ಘವಾಗುತ್ತದೆ. ಆ ಮಾಸ ಮುಗಿದು ಇನ್ನೇನು ಕಾರ್ತೀಕಕ್ಕೆ ಸ್ವಾಗತ ಕೋರಬೇಕು... ತ್ರಯೋದಶಿಯ ದಿನದಿಂದಲೇ ಸಿದ್ದತೆ ಶುರು. ಮಕ್ಕಳಿಗೆ ಪಟಾಕಿ ಹಬ್ಬ. ಮಹಿಳೆಯರಿಗೆ ಕಜ್ಜಾಯ ಹಬ್ಬ. ಹೀಗೆ ಒಂದೊಂದು  ಹೆಸರಿನೊಂದಿಗೆ, ತಿಂಡಿಯೊಂದಿಗೆ ದೀಪಾವಳಿ ತಳುಕು ಹಾಕಿಕೊಂಡಿದೆ. ದೀಪಾವಳಿಗೆ  ಬಟ್ಟೆಗಳು ವಾರ್ಡ್ರೋಬ್ ಗಳಲ್ಲಿ ಹೊಳೆಯುತ್ತಿರುತ್ತದೆ. ದೊಡ್ಡವರಿಗಾದರೆ ಶರ್ಟು-ಪಂಚೆ, ಮಹಿಳೆಯರಿಗಾದರೆ ಬಗೆ ಬಗೆಯ ರೇಷ್ಮೆ  ಸೀರೆಗಳು, ಹದಿಹರೆಯದ ಹುಡುಗಿಯರಿಗೆ ಲಂಗಾ-ದಾವಣಿ, ಅದು ಬಿಟ್ಟರೆ ಚೂಡಿದಾರ್. 

   
  ದೀಪಾವಳಿ  ಹಬ್ಬವನ್ನು ಉತ್ತರ ಭಾರತೀಯರು ಐದು ದಿನಗಳಲ್ಲಿಯೂ, ದಕ್ಷಿಣ ಭಾರತೀಯರು ಮೂರು ದಿನಗಳಲ್ಲಿಯೂ ವಿಶೇಷ ಪೂಜೆಗಳಿಂದ ಆಚರಿಸುತ್ತಾರೆ. ಒಟ್ಟಿನಲ್ಲಿ ಪ್ರಥಮ ದಿನವಾದ ಬಹುಳ ತ್ರಯೋದಶಿಯಿಂದ ತೊಡಗಿ ಐದನೇ ದಿನವಾದ ಯಮದ್ವಿತೀಯವರೆಗೆ ದೀಪಾವಳಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ಹದಿನೈದು ದಿನಗಳ ನಂತರ ಬರುವ ತುಳಸೀ ಪೂಜೆಯೊಂದಿಗೆ ಈ ಆಚರಣೆಯು ಮುಗಿಯುತ್ತದೆ.

   ದಕ್ಷಿಣ ಭಾರತೀಯರು ನರಕ ಚತುರ್ದಶಿ, ಅಮಾವಾಸ್ಯೆ ( ಲಕ್ಷ್ಮೀಪೂಜೆ) ಮತ್ತು ಬಲಿ ಪಾಡ್ಯಮಿ ಎಂದು ಮೂರು ದಿನ ಆಚರಿಸಿದರೆ, ಉತ್ತರ ಭಾರತೀಯರು ಈ ಮೂರುದಿನಗಳ ಮೊದಲು ಧನ್ ತೇರಾಸ್ ಎಂದೂ, ಈ ಮೂರು ದಿನಗಳ ಮರುದಿನ ಯಮದ್ವಿತೀಯ (ಭಾಯಿ ದೂಜ್) ಎಂದೂ ಆಚರಿಸುತ್ತಾರೆ.

   ತ್ರಯೋದಶಿ ದಿನವು ಧನ್ ತೇರಾಸ್ ಎಂಬ ನಾಮದಿಂದ ಕರೆಯಲ್ಪಡುತ್ತಿದ್ದು, ಯಮರಾಜ ಮತ್ತು ಧನ್ವಂತರಿಯ ಐತಿಹ್ಯದೊಂದಿಗೆ ಕೊಂಡಿಯನ್ನಿರಿಸಿಕೊಂಡಿದೆ.ಅವತ್ತು ನೀರು ತುಂಬುವ ಹಬ್ಬ. ಆಕಾಶ ಬುಟ್ಟಿ ಚಾವಡಿಯ ಛಾವಣಿಗೆ ಜೋತುಬೀಳುತ್ತದೆ. ಯಾರು ಎಷ್ಟು ಕಲಾತ್ಮಕವಾಗಿರುವುದನ್ನು ಆಯ್ದು ತರುತ್ತಾರೆ ಅನ್ನುವುದೊಂದು ಪೈಪೋಟಿಯೇ ನಡೆದು ಹೋಗುತ್ತದೆ. ಪ್ರಭಾತ ವೇಳೆಯಲ್ಲಿ ಹೆಂಗಳೆಯರು ಮನೆ ಪರಿಸರವನ್ನು ಶುಚಿಗೊಳಿಸಿ, ಮುಂಬಾಗಿಲನ್ನು ತಳಿರು ತೋರಣಗಳಿಂದ ಶೃಂಗರಿಸಿ ಆರೋಗ್ಯದ ಅಧಿಪತಿಯಾದ ಧನ್ವಂತರಿಯ ಸ್ವಾಗತಕ್ಕಾಗಿ ಸಜ್ಜಾಗುತ್ತಾರೆ. ಅಂತೆಯೇ ಮುಸ್ಸಂಜೆಯ ವೇಳೆ ಅಕಾಲ ಮೃತ್ಯುವನ್ನು ಹೋಗಲಾಡಿಸಲು ಮನೆಯ ಮುಂದೆ ದೀಪವನ್ನು ಇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. 

                                                                                       

 ಧಾರ್ಮಿಕ ಗ್ರಂಥಗಳಲ್ಲಿ 'ದೀಪ ಹಚ್ಚುವ' ಬಗೆಗಿನ ಮಹತ್ವವನ್ನು ತಿಳಿಸಿದ್ದಾರೆ.

  ನಿಮಿಷಂ ನಿಮಿಷಾರ್ಧಂ ವಾ ಘೃತದೀಪಂ ನಿವೇದಯೇತ್ ಕಲ್ಪಕೋಟಿ ಸಹಸ್ರಾಣಿ ವಿಷ್ಣುಲೋಕೇ ಮಹೀಯತೇ -ಎಂದು

 ಒಂದು ನಿಮಿಷವಾಗಲಿ, ಅರ್ಧ ನಿಮಿಷವಾಗಲಿ ದೇವರಿಗೆ ಅರ್ಪಿಸಿದ ದೀಪ ಅನೇಕ ಕಲ್ಪಗಳವರೆಗೂ ವಿಷ್ಣುಲೋಕದಲ್ಲಿ ಮೆರೆಯಲು ಕಾರಣವಾಗುವುದು.


   ಮಾರನೆಯದಿನ ಚತುರ್ದಶಿ.ಅಧಿಕ್ರತವಾಗಿ ಪಟಾಕಿ ಹೊಡೆಯಬಹುದು ಆವತ್ತಿನಿಂದ. ಆಗೆಲ್ಲ ಮನೆಯೆದುರು ಅಂಗಳ ಇರುತ್ತಿತ್ತು. ಪಕ್ಕದ ಮನೆ ದೂರವಿರುತ್ತಿತ್ತು.ಹೂಕುಂಡವೋ ರಾಕೆಟ್ಟೋ ಏನೂ ಹಚ್ಚಿದರೂ ನಿರಾಂತಕ ನಿಂತು ಬೆಡಗು ಸವಿಯಬಹುದಿತ್ತು. ಈಗ ಯಾವ ಬಾಣ,ಯಾವ ಬಿರುಸು ಎಲ್ಲಿ ದಿಕ್ಕು ತಪ್ಪುವುದೋ, ಯಾರ ಕಣ್ಣಿಗೆ ಬೀಳುವುದೋ ಅನ್ನುವ ಕಾಳಜಿವಹಿಸಬೇಕು.  ಪ್ರತಿ ಹಬ್ಬಕ್ಕೂ ಇಂಥದ್ದೊಂದು ಸ್ನಾನ ಇರುತ್ತದೆ. ಯುಗಾದಿ, ಗೌರಿ, ಗಣೇಶ ಹಬ್ಬಕ್ಕೂ ತಪ್ಪಿದ್ದಲ್ಲ.  ದೀಪಾವಳಿಗೆ ಸ್ವಲ್ಪ ಡಿಫರೆಂಟ್ ಅನ್ನುವಂತೆ ಇರುತ್ತೆ. ಮುಖ್ಯವಾಗಿ ಮಕ್ಕಳಿಗೆ ಸಪ್ತ  ಚಿರಂಜೀವಿ ಸ್ನಾನ ಅಂತ ಮಾಡಿಸುತ್ತಾರೆ. ಆಂಜನೇಯ, ಪರುಶುರಾಮ ಸೇರಿ ಒಟ್ಟು  ಏಳು ಮಂದಿ ಈ ಪಟ್ಟಿಯಲ್ಲಿರುವ ಮಹಾಪುರುಷರು. ಅವರ ಶಕ್ತಿ-ಸಾಮರ್ಥ್ಯ  ಬರಲಿ ಎಂದು ಮಕ್ಕಳಿಗೆ ಏಳು ಕಡೆ ಎಣ್ಣೆ ಹಚ್ಚಿ ಈ ಸ್ನಾನ ಮಾಡಿಸಲಾಗುತ್ತದೆ. ಚತುರ್ದಶಿಯಂದು  ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಜನ ಸ್ನಾನ ಮಾಡಿ, ಹೊಸದಾಗಿ ಮದುವೆಯಾದ ಅಳಿಯ ಮತ್ತು ಅವನ ಬಂಧುಬಳಗವನ್ನು ಕರೆಸಿ ಸುಖ ಸಂತೋಷಪಡಿಸುವುದೂ ಪದ್ಧತಿಯಲ್ಲಿದೆ. ಅಭ್ಯಂಜನ ಸ್ನಾನದಿಂದ ನರಕಾಂತಕನಾದ ನಾರಾಯಣನಿಗೆ ಸಂತೋಷ ಉಂಟಾಗುತ್ತದೆ ಮತ್ತು ನರಕಭೀತಿ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಭ್ಯಂಜನಕ್ಕೆ ಉಪಯೋಗಿಸುವ ಎಣ್ಣೆ ಮತ್ತು ಪುಡಿಗಳಿಗೆ ವಿಶೇಷವಾದ ಶಕ್ತಿ ಇದ್ದು ನರ ದೌರ್ಬಲ್ಯವನ್ನು ತಡೆಗಟ್ಟುವುದು. ಅಂದು ಯಮಧರ್ಮರಾಜನಿಗೆ ಹದಿನಾಲ್ಕು ಹೆಸರುಗಳಿಂದ ತಿಲತರ್ಪಣವನ್ನು ಕೊಡುವ ವಿಧಿಯೂ ಇದೆ. ಅಂದು ಬೈಗಿನಲ್ಲೂ ಮತ್ತು ರಾತ್ರಿಯಲ್ಲಿಯೂ ಮಕ್ಕಳಾದಿಯಾಗಿ ದೊಡ್ಡವರೂ ಸೇರಿ ಪಟಾಕಿ, ಬಾಣ ಬಿರುಸುಗಳನ್ನು ಸುಟ್ಟು ನಲಿಯುವರು. ನರಕಪರಿಹಾರಕ್ಕೋಸ್ಕರವಾಗಿ ದೇವಾಲಯಗಳಲ್ಲಿ, ಮಠ, ಬೃಂದಾವನ ಮತ್ತು ಮನೆಗಳ ಅಂಗಳಗಳಲ್ಲಿ, ನದಿ, ಬಾವಿ ಮತ್ತು ಮುಖ್ಯ ಬೀದಿಗಳಲ್ಲಿಯೂ ನಾಲ್ಕು ಬತ್ತಿಗಳುಳ್ಳ ದೀಪಗಳನ್ನು ಹಚ್ಚಿಡುವರು.

                                                                                                                              ಚಿತ್ರ : ಅಂತರ್ಜಾಲ



     ಅಮಾವಾಸ್ಯೆ ದಿನವೇ ದೀಪಾವಳಿ. ಅಂದು ವರ್ಷದ ಅತ್ಯಂತ ಕಾರಿರುಳು ಇರುವ ದಿನ ಎಂದು ನಂಬಲಾಗಿದೆ. ಆ ದಿನ ಲಕ್ಷ್ಮೀಪೂಜೆಗೆ, ಅದರಲ್ಲೂ ಧನಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವ. ಆ ದಿನ ವ್ಯಾಪಾರಿಗಳು ಅಂಗಡಿಪೂಜೆ ಮಾಡಿ ಧನಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. ಕೆಲವೆಡೆ ಭಕ್ತರು ಧನಾಧಿಪತಿಯಾದ ಕುಬೇರನನ್ನು ಪೂಜಿಸಿ ಪೂಜಾಗೃಹದಲ್ಲಿ ಕುಬೇರಯಂತ್ರವನ್ನು ಸ್ಥಾಪಿಸುತ್ತಾರೆ. ಆದಿವಂದಿತ ಗಣಪನಿಗೆ ಪೂಜೆ ಸಲ್ಲಿಸಿದ ಮೇಲೆ ಕುಬೇರನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಕುಬೇರಯಂತ್ರ ಸ್ಥಾಪಿಸುವಾಗ ಜೇನು, ಬೆಲ್ಲ ಮತ್ತು ಒಣ ಖರ್ಜೂರವನ್ನು ಯಂತ್ರದ ಮುಂದಿರಿಸಿ ತುಪ್ಪದಿಂದ ದೀಪ ಹಚ್ಚುವುದು ಸಂಪ್ರದಾಯ. ಅಂಗಡಿಪೂಜೆಯಂದು ಪ್ಯಾಪಾರಿಗಳು ತಮ್ಮ ಅಂಗಡಿಯನ್ನು ಚೊಕ್ಕಗೊಳಿಸಿ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಉತ್ತರ ಭಾರತದಲ್ಲಿ ಮತ್ತು ಇತರೆಡೆಗಳಲ್ಲಿ ರಾತ್ರಿ ಪೂರ್ತಿ ಜಾಗರಣೆ ಮಾಡಿ ಸಂಪತ್ತಿನ ಒಡತಿ ಲಕ್ಷ್ಮಿಯನ್ನು ಪೂಜಿಸುವರು. ಲಕ್ಷ್ಮೀದೇವಿಯ ಜೊತೆಗೆ ಧನಾಧಿಪತಿಯಾದ ಕುಬೇರನನ್ನೂ ಆರಾಧಿಸುವ ವಾಡಿಕೆ ಇದೆ. ಪ್ರತಿ ಮನೆ ಮನೆಗಳಲ್ಲಿಯೂ ಅತಿ ಕಡಿಮೆ ಎಂದರೆ ಒಂದು ಗ್ರಾಮಿನಷ್ಟು ಚಿನ್ನ ಅಥವಾ ಬೆಳ್ಳಿಯನ್ನು ಕೊಳ್ಳುವುದೂ ವಾಡಿಕೆ. ಅಂದು ಅಕ್ಕ ಪಕ್ಕದ ಮನೆಯವರುಗಳಿಗೆ ಮತ್ತು ನೆಂಟರಿಷ್ಟರುಗಳಿಗೆ ಬಾಗಿನ ಕೊಡುವುದೂ ರೂಢಿಯಲ್ಲಿದೆ. ಕೆಲಸಗಾರರಿಗೆ ಮಾಲೀಕರು ಬೋನಸ್, ಉಡುಗೊರೆಗಳನ್ನು ನೀಡುತ್ತಾರೆ.

     ಕಜ್ಜಾಯವೇ ದೀಪಾವಳಿಯ ಮುಖ್ಯ ಮೆನು ಆಗಿರುವುದರಿಂದ ಅದಕ್ಕಾಗಿ ಹಿಂದಿನ ದಿನ ಅಕ್ಕಿ ನೆನೆ ಹಾಕಲಾಗುತ್ತೆ. ಮಹಿಳೆಯರು ಕಜ್ಜಾಯ ತಯಾರಿ ಮಾಡಬೇಕಾದರೆ ಅತಿ ಎಚ್ಚರವಹಿಸುತ್ತಾರೆ. ಮೊದಲ ದಿನ ನೆನೆ ಹಾಕಿದ ಅಕ್ಕಿಯನ್ನು ಮರುದಿನ ಕುಟ್ಟಿ ನುಣುಪಾದ ಹಿಟ್ಟಾಗಿ ಮಾಡುತ್ತಾರೆ. ಹಿಟ್ಟಿಗೆ ಹದವಾಗಿ ಪಾಕ  ಸಿದ್ದಪಡಿಸುವುದು ಅಂದರೆ ಒಂದು ಸವಾಲಿನ ಕೆಲಸವೆ. ಕೆಲ ಮನೆಗಳಲ್ಲಿ ಸಕ್ಕರೆ ಕಜ್ಜಾಯ ಮಾಡಿದರೆ, ಇನ್ನು ಕೆಲವರು ಬೆಲ್ಲದ ಕಜ್ಜಾಯ ಮಾಡುತ್ತಾರೆ. ಉಳಿದಂತೆ ಐದಾರು ರೀತಿಯ ಪಲ್ಯಗಳು, ಅನ್ನ, ರಸಂ, ಬಾಯಲ್ಲಿ ನೀರೂರಿಸುವ ಹುಳಿ ಇತ್ಯಾದಿಗಳನ್ನು ಸಿದ್ದಪಡಿಸುತ್ತಾರೆ.

      ಕಾರ್ತಿಕ ಶುದ್ಧ ಪ್ರಥಮಾ ತಿಥಿಯಂದು ಬಲಿಪಾಡ್ಯಮಿ. ಅಂದು ಸ್ವಾತಿ ನಕ್ಷತ್ರವಿದ್ದರೆ ಇನ್ನೂ ತುಂಬಾ ಶ್ರೇಷ್ಠವಾದ ದಿನ. ಅಂದಿನ ಮುಖ್ಯ ವಿಧಿಗಳಲ್ಲಿ ಬಲೀಂದ್ರ ಪೂಜೆಯೂ ಒಂದು. ಬಲೀಂದ್ರನ ಚಿತ್ರವನ್ನು ಐದು ಬಣ್ಣದ ಪುಡಿಗಳಿಂದ ರಚಿಸಬೇಕು ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಆತನೊಡನೆ ಆತನ ಪತ್ನಿ ವಿಂಧ್ಯಾವಳೀ ಮತ್ತು ಪರಿವಾರದ ರಾಕ್ಷಸರಾದ ಬಾಣ, ಕೂಷ್ಮಾಂಡ ಮತ್ತು ಮುರರನ್ನು ಚಿತ್ರಿಸಬೇಕು. ಬಲೀಂದ್ರನನ್ನು ಕರ್ಣಕುಂಡಲ, ಕಿರೀಟ ಮುಂತಾದ ಆಭರಣಗಳಿಂದ ಅಲಂಕಾರಗೊಳಿಸಬೇಕು. ಕಮಲದ ಹೂ, ಸುವರ್ಣ ಪುಷ್ಪ, ಗಂಧ, ಧೂಪ, ದೀಪ ಮತ್ತು ನೈವೇದ್ಯಗಳಿಂದ ಆತನನ್ನು ಪೂಜಿಸಬೇಕು. ಬಲಿ ಚಕ್ರವರ್ತಿಯ ನೆನಪಿನಲ್ಲಿ ದಾನವನ್ನು ಮಾಡುವುದರಿಂದ ದಾನವು ಅಕ್ಷಯವಾಗುವುದು ಮತ್ತು ನಾರಾಯಣನು ಪ್ರಸನ್ನನಾಗುವನು ಎಂಬ ಪ್ರತೀತಿ ಇದೆ. ಅಂದು ಹಸುಗಳಿಗೆ ಮತ್ತು ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿಯನ್ನು ಕೊಡಬೇಕು. ಅವುಗಳಿಗೆ ಸ್ನಾನ ಮಾಡಿಸಿ ಅಲಂಕರಿಸಿ, ಒಳ್ಳೆಯ ಆಹಾರವನ್ನು ಕೊಟ್ಟು ಪೂಜಿಸಬೇಕು. ಗೋವರ್ಧನ ಪರ್ವತವನ್ನು ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಪೂಜಿಸಬೇಕು. ಗೋವರ್ಧನ ಗಿರಿಗೆ ಹೋಗಲಾಗದವರು ಆ ಪರ್ವತದ ಚಿತ್ರವನ್ನು ರಚಿಸಿ ಪೂಜಿಸಬೇಕು.

     ಕಾರ್ತಿಕ ಶುದ್ಧ ದ್ವಿತೀಯಾ ತಿಥಿಯಂದು ಉತ್ತರ ಭಾರತದಲ್ಲಿ ಭಾವು ದೂಜ್ ಎಂದೂ, ಮಹಾರಾಷ್ಟ್ರದಲ್ಲಿ ಭಾವುಬೀದ್ ಎಂದೂ, ಇತರೆ ಕಡೆಗಳಲ್ಲಿ, ಭ್ರಾತೃದ್ವಿತೀಯಾ, ಯಮದ್ವಿತೀಯಾ, ಭಗಿನೀದ್ವಿತೀಯಾ ಅಥವಾ ಸೋದರಿ ಬಿದಿಗೆ ಎಂದು ಹಬ್ಬವನ್ನಾಚರಿಸುವರು. ಆ ದಿನದಂದು ಯಮಧರ್ಮರಾಜನು ತನ್ನ ಸೋದರಿಯಾದ ಯಮುನಾದೇವಿಯ ಮನೆಗೆ ತೆರಳಿ ಆಕೆಯ ಆತಿಥ್ಯವನ್ನು ಗೌರವಿಸಿದನೆಂದು ಪ್ರತೀತಿ ಇದೆ. ಅಂದು ಮಧ್ಯಾಹ್ನ ಪುರುಷರು ತಮ್ಮ ಮನೆಗಳಲ್ಲಿ ಊಟ ಮಾಡದೇ, ಸೋದರಿಯ ಮನೆಗೆ ಔತಣಕ್ಕೆ ಹೋಗಬೇಕು. ಆಕೆಗೆ ಯಥಾಶಕ್ತಿ ಉಡುಗೊರೆಯನ್ನು ಇತ್ತು ಗೌರವಿಸಬೇಕು. ಅಂದು ಯಮನಿಗೂ, ಯಮುನಾದೇವಿಗೂ ಮತ್ತು ಚಿತ್ರಗುಪ್ತನಿಗೂ ಅರ್ಘ್ಯವನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಬೇಕು. ಅಲ್ಲದೇ ಚಿರಂಜೀವಿಗಳಾದ ಮಾರ್ಕಂಡೇಯ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ ಮತ್ತು ಅಶ್ವತ್ಥಾಮ ಇವರುಗಳಿಗೆ ಪೂಜೆ ಸಲ್ಲಿಸಬೇಕು.

ನನ್ನ ಸೊಸೆ ತ್ರಿಶ

'ತುಳುವಾಲ ಬಲಿಯೇಂದ್ರ'
  ಓ... ಬಲೀಂದ್ರ ಮೂಜಿ ದಿನತ ಬಲಿಗೆತೊಂದು ಪೋಲಿ ಕೊರ್ಲ ಕೂ... ಆ ಊರುದ ಬಾಲಿ ಕೊನೊಪೋಲ... ಇದು ತುಳು ನಾಡಿನ ದೀಪಾವಳಿಯಲ್ಲಿ ಬಲೀಂದ್ರನನ್ನು ಕರೆಯುವ  ಸಂಭ್ರಮದ ಕ್ಷಣ. ತುಳುನಾಡಿನ ಮನೆ  ಮನಗಳಲ್ಲಿ ಬಲಿಯೇಂದ್ರ ಪರಮ ಪೂಜ್ಯ ಸ್ಥಾನವನ್ನು ಪಡೆದಿದ್ದಾನೆ. ತುಳುನಾಡಿನ ಪಾಡ್ದನದ ಪ್ರಕಾರ ಆತ 'ತುಳುವಾಲ ಬಲಿಯೇಂದ್ರ'. ಈ ನಾಡಿನ  ಪ್ರಾಚೀನ ದೊರೆ. ಆತನ ಜನಪ್ರಿಯ ಆಳ್ವಿಕೆಯ ವೈಖರಿಗೆ ಬೆಚ್ಚಿದ ನಾರಾಯಣ ದೇವರು ಮಾರುವೇಷದಿಂದ ತುಳುನಾಡು ನೋಡುವುದಕ್ಕೆ, ತುಳು ಭಾಷೆ ಕಲಿಯುವುದಕ್ಕೆ ಬಂದೆನೆಂದು ಹೇಳುತ್ತಾ ಜಾಣ್ಮೆಯಿಂದ ಆತನ ಸರ್ವ ಸಂಪತ್ತನ್ನೂ ಸ್ವಾಧೀನಪಡಿಸಿಕೊಂಡು ಭೂಲೋಕದಿಂದ ಆಚೆಗೆ ಕರೆದೊಯ್ದಿದ್ದಾನೆ. ಆದರೆ ಬಲಿಯೇಂದ್ರನ ಪ್ರಜಾಪ್ರೀತಿಗೆ ಕರಗಿದ ನಾರಾಯಣ ದೇವರು ಆತನದಾಗಿದ್ದ ಭೂಲೋಕದಲ್ಲಿ ಆತ ದೀಪಾವಳಿಯ ಮೂರು ದಿನ ಇದ್ದು ಹೋಗಲು ಅವಕಾಶ ನೀಡುತ್ತಾನೆ. ಕೃಷಿಯ ಮೇಲಿನ ಅಭಿಮಾನ, ಸಮೃದ್ಧ ಫಸಲಿನ ನಿರೀಕ್ಷೆ, ಭೂಮಿ ಮೇಲಿನ ಪ್ರೀತಿ, ಬಲಿಯೇಂದ್ರನ ಕುರಿತ ಭಕ್ತಿ- ಎಲ್ಲವುಗಳನ್ನು ಆವಾಹಿಸಿಕೊಂಡ ತುಳುವರು ದೀಪಾವಳಿಯ ಮೂರು ದಿನ ಬಲಿಯೇಂದ್ರನ ಆರಾಧನೆಯಲ್ಲಿ ಮೈಮರೆಯುತ್ತಾರೆ.

    ದೀಪಾವಳಿಯ ಅಬ್ಬರ ಮುಗಿದ ನಂತರದ ಹದಿನೈದನೇ ದಿನ ಅಂದರೆ ಹುಣ್ಣಿಮೆಯ ದಿನದಂದು ಆಚರಿಸುವ ಹಬ್ಬವೇ ತುಳಸೀ ವಿವಾಹ ಅಥವಾ ತುಳಸೀ ಪೂಜೆ. ದೇವಿ ಮಹಾಲಕ್ಷ್ಮಿಯು 'ವೃಂದಾ 'ಎಂದು ತುಳಸಿಯ ರೂಪದಲ್ಲಿ ಜನಿಸಿ ಭಕ್ತರನ್ನು ರಕ್ಷಿಸುತ್ತಾಳೆ ಎಂಬ ವಿಶ್ವಾಸದಿಂದ ತುಳಸೀ ಪೂಜೆಯನ್ನು ಮಾಡಲಾಗುತ್ತದೆ. ಅಂದು ಮನೆಯ ಮುಂದಿರುವ ತುಳಸೀಗಿಡವನ್ನು ಕಬ್ಬಿನ ಬೇಲಿ ಕಟ್ಟಿ ಹುಣಸೆ ಮತ್ತು ನೆಲ್ಲಿಕಾಯಿ ಮರದ ರೆಂಬೆಗಳಂದ ಶೃಂಗರಿಸಿ ಸಂಜೆಯ ವೇಳೆ ಪೂಜೆ ಮಾಡಲಾಗುತ್ತದೆ. ಕಬ್ಬು ಮಿಶ್ರಿತ ಅವಲಕ್ಕಿ ಬೆಲ್ಲದ ಪ್ರಸಾದವನ್ನು ವಿತರಿಸಿ ತುಳಸೀ ಪೂಜೆಯನ್ನು ಮುಕ್ತಾಯಗೊಳಿಸುತ್ತಾರೆ. ಇದರೊಂದಿಗೆ ದೀಪಾವಳಿಯ ಆಚರಣೆಯು ಕೊನೆಗೊಳ್ಳುತ್ತದೆ.

    ರಾಮಾಯಣದಲ್ಲಿ ಮೇಘನಾಥನು (ಇಂದ್ರಜಿತು) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವ  ನಮ್ಮ ಪಾಪಗಳನ್ನು ಹೋಗಲಾಡಿಸಲಿ.

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಶುಕ್ರವಾರ, ಅಕ್ಟೋಬರ್ 11, 2013

ಆಸೆಯ ಬಲೆ

   ಮೊನ್ನೆ ನನ್ನ ಸ್ನೇಹಿತ ರಶಿಧ್ ತನ್ನಲ್ಲಿ ಉಳಿದಿರುವ ಸುಮಾರು 15GBಯಷ್ಟು ಇಂಟರ್ನೆಟ್ ಬ್ಯಾಲೆನ್ಸ್ ನಲ್ಲಿ ಯಾವುದಾದರೂ ಒಳ್ಳೆಯ ಹಳೆಯ ಸಿನೆಮಾ ಡೌನ್ಲೋಡ್ ಮಾಡೋಣ ಅಂದ. ಆಗ ನಮಗೆ ನೆನಪಿಗೆ ಬಂದದ್ದು ವಿಷ್ಣುವರ್ಧನ್ ಮತ್ತು ಜೈಜಗದೀಶ್ ಒಟ್ಟಿಗೆ ಅಭಿನಯಿಸಿದ ಒಂದು ಹಳೆಯ ಚಿತ್ರ. ಆದರೆ  ಅದರ ಹೆಸರು ಗೊತ್ತಿಲ್ಲ. ರಶಿಧ್ ಇಂಟರ್ನೆಟ್ನಲ್ಲಿ ಹುಡುಕಲು ಶುರು ಮಾಡಿದ  ಸಿನೆಮಾ ಹೆಸರೇನೋ ಸಿಕ್ಕಿತು ಆದರೆ ಸಿನೆಮಾ ಡೌನ್ ಲೋಡ್ ಮಾಡಲು ಸಿಗಲಿಲ್ಲ.
1989ನೆ ಇಸವಿ ಇರಬಹುದು ನಮ್ಮ ಊರಲ್ಲಿ ಆಗ ಒಬ್ಬರ ಮನೆಯಲ್ಲಿ ಮಾತ್ರ ಇದ್ದದ್ದು ಸಣ್ಣ ರೇಡಿಯೋ ಗಾತ್ರದ ಬ್ಲಾಕ್ ಆಂಡ್ ವೈಟ್ ಟಿ.ವಿ. ಆ ಸಮಯದಲ್ಲಿ ನಾವು ಈಗ ನೆನಪು ಮಾಡಿಕೊಂಡ ಸಿನೆಮಾವನ್ನು ಒಂದು ಸಂಜೆ ಸಿಡಿಲಿನೊಂದಿಗೆ ಮಳೆ ಬರುತ್ತಿದ್ದ ಸಮಯದಲ್ಲಿ ನಿಮಿಷಕ್ಕೊಂದು ಜಾಹಿರಾತುಗಳ ಮಧ್ಯೆ ಅರ್ಧಂಬರ್ದ ನೋಡಿದ್ದೆ. ಅಂದಿನಿಂದ ಇಂದಿನವರೆಗೆ ನನಗೆ ಈ ಸಿನೆಮಾ ನೋಡಲಾಗಲೇ ಇಲ್ಲ. ಇಂದೇಕೋ ಅಂದು ಅರ್ಧಂಬರ್ದ ನೋಡಿದ ಸಿನೆಮಾದ ನೆನಪು ಮನಸ್ಸಿನ ದಡಕ್ಕೆ ಬಂದು ಅಪ್ಪಳಿಸಿತ್ತು.ಇಲ್ಲಿ ಹತ್ತಿರದಲ್ಲಿ ಎಲ್ಲೂ 26 ವರ್ಷದಷ್ಟು ಹಳೆಯ ಕನ್ನಡ ಸಿನೆಮಾದ ಸಿ.ಡಿ. ಸಿಗದ್ದಿದ್ದರಿಂದ ಇಂಟರ್ನೆಟ್ ನಲ್ಲಿ ಸಿ.ಡಿ. ಅಂಗಡಿಯ ಫೋನ್ ನಂಬ್ರ ಹುಡುಕಿ  ಬೆಂಗಳೂರಿನಿಂದ ವಿ.ಪಿ.ಪಿ. ಮೂಲಕ ಸಿ.ಡಿ.ತರಿಸಿ, ಲ್ಯಾಪ್ ಟಾಪ್ ಮೂಲಕ ಸಿನೆಮಾ ನೋಡಲು ಕುಳಿತೆವು.

   ಇಂಗ್ಲೆಂಡ್ ನಿಂದ ಬಂದ ಸಿನೆಮಾ ನಾಯಕನ  ಗೆಳೆಯ ನಾಯಕ ಮತ್ತು ನಾಯಕಿಯನ್ನು ಮುಂಬಯಿಗೆ ಸುತ್ತಾಡಿಸಲು ರೈಲಿನಲ್ಲಿ ಹೋಗುತ್ತಿರುವಾಗ ನಾಯಕನನ್ನು ರೈಲಿನ ಬಾಗಿಲಿಂದ ಹೊರಗೆ ದೂಡುತ್ತಾನೆ. ಹಣ, ಕೀರ್ತಿಯ ವ್ಯಾಮೋಹಕ್ಕೆ ಒಳಗಾಗಿದ್ದ ನಾಯಕಿ ತನ್ನ ಗಂಡನ ಸ್ನೇಹಿತ ತನ್ನೊಟ್ಟಿಗಿದ್ದು ತನಗೆ ತನ್ನ ಆಕಾಂಕ್ಷೆಗಳನ್ನು ಈಡೇರಿಸಲು ಸಹಾಯವಾಗಬಹುದಾದ್ದರಿಂದ ತನ್ನ ಗಂಡನನ್ನು ಕಳೆದುಕೊಂಡರೂ ಯಾವುದೇ ನೋವು ಅನುಭವಿಸುವುದಿಲ್ಲ. ಬಹಳ ವರ್ಷಗಳ ಹಿಂದೆ ಮೈಸೂರು ದಸರಾ ಸಂದರ್ಭದಲ್ಲಿ ತಮ್ಮ ಐದು ವರ್ಷದ ಮಗ ಕಣ್ಮರೆಯಾಗಿದ್ದ ದಂಪತಿಗೆ ಕಾರಲ್ಲಿ ಬರುತ್ತಿರುವಾಗ, ರೈಲಿನಿಂದ ಬಿದ್ದು ಒದ್ದಾಡುತ್ತಿರುವ ನಾಯಕ ಸಿಕ್ಕಿ ಇವನೇ ನಮ್ಮ ಮಗ ಎಂದು ಸ್ವೀಕರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಒಂದು ದಿನ ಕಾರ್ ಆಕ್ಸಿಡೆಂಟ್ ಆಗಿ ತನ್ನ ಹಿಂದಿನ ಎಲ್ಲಾ ನೆನಪುಗಳು ಕಣ್ಣಮುಂದೆ ಬಂದು ನಾಯಕ ತನ್ನ ಸೂಟ್ ಕೇಸ್ ನೊಂದಿಗೆ ಮದ್ರಾಸ್ ಗೆ ಹೋಗುತ್ತಾನೆ. ಮದಾಸಿನಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ತನ್ನ ಹೆಂಡತಿ ನಟಿಸಿದ ಸಿನೆಮಾ 'ಪತಿವೃತಾ'ದ ದೊಡ್ಡ ಪೊಸ್ಟರ್ ಗಳನ್ನು ಒಂದು ಕ್ಷಣ ಹಾಗೆಯೇ ನಿಂತು ನೋಡುತ್ತಾನೆ.ಪತಿವೃತಾ ಸಿನೆಮಾದ ಡೈರೆಕ್ಟರನ್ನು ಭೇಟಿಯಾದ ನಾಯಕ ತಾನೊಬ್ಬ ಸಿನೆಮಾ ಪ್ರೊಡ್ಯುಸರ್ ಎಂದು, ತಾನು ತೆಗೆಯುತ್ತಿರುವ ಸಿನೆಮಾಕ್ಕೆ 'ಪತಿವೃತಾ' ಸಿನೆಮಾದ ನಾಯಕಿಯೇ ನಾಯಕಿಯಾಗಿ ಬರುವಂತೆ ಒಪ್ಪಿಸುತ್ತಾನೆ.



ಸಿನೆಮಾದ ಕತೆ ಕೇಳಲು ಬಂದ ನಾಯಕಿಗೆ ತನ್ನ ಗಂಡನ ಮುಖವನ್ನು ಹೋಲುತ್ತಿರುವ ವ್ಯಕ್ತಿಯನ್ನು ಕಂಡು ಒಂದು ಕ್ಷಣ ದಿಗ್ಭ್ರಮೆ, ಆತಂಕ. ಆ ವ್ಯಕ್ತಿಯನ್ನೇ ನೋಡುತ್ತಾ ನಿಂತ ನಾಯಕಿಯನ್ನು ಕುರಿತು ನಾಯಕ ಕೇಳುತ್ತಾನೆ.

"ಏನ್ ಆ ತರಹ ನೋಡುತ್ತಿದ್ದೀರಾ ಮಿಸ್ ಮೀನಾದೇವಿ.ರಾತ್ರಿ ಹೊತ್ತಲ್ಲೂ ಯಾಕೆ ಕೂಲಿಂಗ್ ಗ್ಲಾಸ್ ಹಾಕ್ ಕೊಂಡಿದ್ದೇನೆ ಎಂದು ಆಶ್ಚರ್ಯವಾಗುತ್ತಿದೆಯಾ ? ಈ ಬಣ್ಣದ ಪ್ರಪಂಚದಲ್ಲಿ ಕಪ್ಪು ಬಣ್ಣ ಅಂತ ಒಂದಿದೆ ಆ ಬಣ್ಣ ಈ ಗ್ಲಾಸಲ್ಲಿ ಬಹಳ ಚೆನ್ನಾಗಿ ಕಾಣುತ್ತೆ.ಪ್ರಕಾಶಮಾನವಾದ ಯಾವುದೇ ಬಣ್ಣವನ್ನು ನೋಡಲು ಈ ಕಣ್ಣು ಇಷ್ಟಪಡುವುದಿಲ್ಲ."
ಡೈರೆಕ್ಟರ್ ನಾಯಕಿಯನ್ನುದ್ದೇಶಿಸಿ, ಇವರು ಕತೆನೂ ಬರೆಯುತ್ತಾರೆ ಕತೆ ಮಾತ್ರವಲ್ಲ ಏನನ್ನೂ ಬೇಕಾದರೂ ಬರೆಯುತ್ತಾರೆ ಅನ್ನುತ್ತಾನೆ.
"ಇಲ್ಲ ಕತೆ ಮಾತ್ರ ಬರೆಯುತ್ತೇನೆ. ಮನುಷ್ಯನ ಹಣೆಬರಹ ಬರೆಯಲು ನನ್ನಿಂದ ಸಾಧ್ಯವಿಲ್ಲವೆನ್ನುತ್ತಾನೆ.
"ಇಲ್ಲಿ ನೀವು ಒಬ್ಬರೇ ಇದ್ದೀರಾ ?"ನಾಯಕಿಯ ಕುತೂಹಲದ ಪ್ರಶ್ನೆ.
"ಅಂದರೆ ಅ...ಅಹ.. ಈಗ ಅರ್ಥಯಾಯ್ತು. ನೀವು ನನ್ನ ಹೆಂಡತಿಯ ಬಗ್ಗೆ ಕೇಳುತ್ತಿದ್ದೀರಾ. ಹೌದು ಮೀನಾ ದೇವಿ ನನಗೆ ಮದುವೆಯಾಗಿತ್ತು. ಆದರೆ ನನ್ನ ಹೆಂಡತಿ ಮದುವೆಯಾದ ಮೊದಲನೆಯ ರಾತ್ರಿಯೇ ಸತ್ತು ಹೋದ್ಲು."
"ಮೊದಲನೆಯ ರಾತ್ರಿನಾ ?"
"ಅಹ್..ಅಹ...ಅಹ..ಮೊದಲನೇ ರಾತ್ರಿ."
"ಮತ್ತೆ ನೀವ್ ನಗ್ತಾ ಇದ್ದೀರಾ ?"
"ಜೀವನದಲ್ಲಿ ಇಷ್ಟು ದೊಡ್ಡ ತಮಾಷೆ ನೋಡಿದ ಮೇಲೆ ನಗ್ದೆ ಏನ್ ಮಾಡ್ಲಿ ಮೀನಾದೇವಿ"

ಬಿಳಿ ಪಾಯ್ ಜಾಮ್, ಗಡ್ಡ ಬಿಟ್ಟ ಕೂಲಿಂಗ್ ಗ್ಲಾಸ್ ಹಾಕಿಕೊಂಡಿರುವ ಪ್ರೊಡ್ಯೂಸರ್ ಗೆಟಪ್ ನಲ್ಲಿರುವ ನಾಯಕ ತಾನು ತೆಗೆಯಬೇಕೆಂದಿರುವ ಸಿನೆಮಾದ ಕತೆ ಹೀಗೆ ಹೇಳುತ್ತಾನೆ.

 "ಈ ಕತೆಯ ಹೀರೊ ಮಿಡ್ಲ್ ಕ್ಲಾಸಿಗೆ ಸೇರಿದವನು. ರಸಿಕ. ಹೀರೋಯಿನ್ ಗಾಯಕಿಯ ಒಂದು ಪ್ರೋಗ್ರಾಮಲ್ಲಿ ಹಾಡ್ ಕೇಳಿ ಹೀರೋ ಬೆರಗಾದ.ಅವಳ ಅಂದಕೆ ಮರುಳಾದ.ಈಕೆನೇ ನನ್ನ ಹೆಂಡ್ತಿ ಆಗಬೇಕೆಂದು ಆಸೆಪಟ್ಟ.ಆದರೆ ಹೀರೋಯಿನ್ ಗೆ ಈ ಮದುವೆ ಇಷ್ಟವಿರಲಿಲ್ಲ.ಯಾಕೆಂದರೆ ಅವಳಿಗೆ ಕೀರ್ತಿಯಾಸೆ, ಐಶ್ವರ್ಯದ ಅಸೆ. ಸದಾ ಅಸೆ ಬಲೆಗೆ ಸಿಕ್ಕಿ ಬಂಗಾರದ ಜಿಂಕೆಯ ಹಿಂದೆ ಓಡೋ ಹೆಣ್ಣು. ಹೇಗೂ ಅಪ್ಪ ಅಮ್ಮನ ಬಲವಂತಕೆ ಒಪ್ಪಿ ಮದುವೆಯಾದಳು.ಆದರೆ ಜೀವನದಲ್ಲಿ ತಾನೂ ಸುಖಪಡಲಿಲ್ಲ ಗಂಡನಿಗೂ ಸುಖಕೊಡಲಿಲ್ಲ.ಆಕಾಶದಲ್ಲಿ ಹಾರಾಡುತ್ತಿದ್ದ ಅರಗಿಣಿನ ಬಲೆ ಬೀಸಿ ಹಿಡಿದು ನನ್ನ ಭವಿಷ್ಯನೇ ಹಾಳು ಮಾಡಿದೆ ಅಂತ  ಹೇಳುತ್ತಿದ್ಲು. ಬೈತಾ ಇದ್ಲು.ಅವಳು ಎಷ್ಟೇ ಅವಮಾನ ಮಾಡಿದ್ರೂ ಗಂಡ ಸಹಿಸ್ಕೊಳ್ತಾ ಇದ್ದ. ಯಾಕೆಂದರೆ ಅವನಿಗೆ ಹೆಂಡ್ತಿಯಂದ್ರೆ ಪಂಚಪ್ರಾಣ.ಅವಳ ಆನಂದಕ್ಕೋಸ್ಕರ ಎಂತಹ ತ್ಯಾಗ ಮಾಡುವುದಕ್ಕೂ ಸಿದ್ದವಾಗಿದ್ದ."
"ಈ ಕತೆ ಯಾರದ್ದು ?" ಕತೆ ಕೇಳುತ್ತಿದ್ದ ನಾಯಕಿಯ ಉದ್ವೇಗದ ನುಡಿ.
"ಯಾಕೆ ಮೀನಾದೇವಿಯವರೆ ನನ್ ಕತೆ ನನ್ನ ಸ್ವಂತ ಕತೆ. ಜೀವನದಲ್ಲಿ ನಾ ಬರೆದಿರುವ ಒಂದೇ ಒಂದು ಕತೆ. ಆಂ..ಮುಂದೆ ಕೇಳಿ (ಪ್ರೊಡ್ಯುಸರ್ ತನ್ನ ಕೈಯಲ್ಲಿದ್ದ ಜ್ಯೂಸ್ ನ ಒಂದು ಗುಟುಕು ಹೀರಿ ಮುಂದುವರಿಸಿದ)ಆದರೆ ಅವಳಿಗೆ ತಾಯಿಯಾಗುವುದಕ್ಕೆ ಇಷ್ಟವಿರಲಿಲ್ಲ.ವಿಧಿ ಇಲ್ಲ. ಅವಳಿಗಾದ ನಿರಾಶೆ ಎಲ್ಲಾ ತಡ್ಕೊಂಡ್ಲು. ಹೀಗಿರುವಾಗ ಒಂದು ದಿವಸ  ಹೀರೋ ಸ್ನೇಹಿತ ಫಾರಿನ್ ನಿಂದ ಬಂದ. ಅವನಿಗೆ ಹೀರೋಹಿನ್ ಪರಿಚಯವಾಯ್ತು.ಅವಳ ಅಂದ ಚಂದಕೆ ಅವನು ಮಾರು ಹೋದ. ಅವರ ಸಂಸಾರಕೆ ಸಹಾಯ ಮಾಡೋಕೆ ಬಂದ ತರಹ ನಾಟಕವಾಡಿದ. ನಿಧಾನವಾಗಿ ಹಿರೋಹಿನ್ ಜೊತೆ ಸಲುಗೆ ಬೆಳೆಸಿಕೊಂಡ."
ಒಮ್ಮೆಲೆ ಕುಳಿತಲ್ಲಿಂದ ಎದ್ದು ನಿಂತು ಕೊಂಡ ನಾಯಕಿಯ ಕೈಯಲ್ಲಿದ್ದ ಜ್ಯೂಸ್ ನ ಗ್ಲಾಸ್ ಕೆಳಗೆ ಬಿದ್ದು ಪುಡಿ ಪುಡಿಯಾಗುತ್ತದೆ.
"ಅರೆ ಏನಾಯ್ತು ಮೀನಾದೇವಿ.ಪರ್ವಾಗಿಲ್ಲ ನಾನ್ ಬೇರೆ ತರ್ತೀನಿ."
ನಾಯಕಿ ಅಲ್ಲಿಂದ ಹೊರಡಲು ಅನುವಾಗುತ್ತಾಳೆ.
"ಯಾಕೆ ಪೂರ್ತಿ ಕೇಳುವುದಿಲ್ವ ?"
"ನನ್ಗೆ ತಲೆ ನೋಯ್ತಿದೆ.ಇಫ್ ಯು ಡೋಂಟ್ ಮೈಂಡ್ ನಾ ಬರ್ತೀನಿ."



ಇದು ಸಿನೆಮಾದ ಕತೆಯ ಸಣ್ಣ ಭಾಗ. ಸಿನೆಮಾ ತುಂಬಾ ವರ್ಷಗಳ ಹಿಂದಿನದಾದರೂ, ಈಗಲೂ ಒಮ್ಮೆ ನೋಡಿದರೂ ಮತ್ತೊಮ್ಮೆ ನೋಡುವಷ್ಟು ಇಷ್ಟವಾಗುತ್ತದೆ.ಅಂದ ಹಾಗೆ ನಾನು ಸಿನೆಮಾದ ಹೆಸರನ್ನೇ ಹೇಳಿಲ್ಲ. ಸಿನೆಮಾದ ಹೆಸರು "ಆಸೆಯ ಬಲೆ".
 ಒಂದು ದಿನ ಬಿಟ್ಟು ಸಿನೆಮಾ ನಾಯಕಿಯ ಮನೆಗೆ ಬಂದ ಪ್ರೊಡ್ಯುಸರ್ ಆಗಿ ನಟಿಸುತ್ತಿದ್ದ ನಾಯಕ ಮನೆಯ ದೊಡ್ಡ ಹಾಲ್ ನಲ್ಲಿರುವ ಎರಡು ದೊಡ್ಡ ದೊಡ್ಡ ಫೊಟೊಗಳನ್ನು ಗಮನಿಸುತ್ತಾನೆ. ಆ ಎರಡು ಫೊಟೊಗಳಲ್ಲಿ ಒಂದು ತನ್ನ ಹೆಂಡತಿಯ ಫೊಟೊ ಆಗಿದ್ದರೆ, ಮತ್ತೊಂದು ತನ್ನ ಗೆಳೆಯನದ್ದಾಗಿರುತ್ತದೆ. ಆಗ ನಾಯಕ ತನ್ನ ಹೆಂಡತಿ ಹಿಂದೆ ಹೇಳಿದ್ದ ಕೆಳಗಿನ ವಾಕ್ಯವನ್ನು ನೆನಪಿಸಿಕ್ಕೊಳ್ಳುತ್ತಾನೆ.
"ಕಾಲ ಹೀಗೆ ಇರೊಲ್ಲಾರಿ ಒಂದಲ್ಲ ಒಂದು ದಿನ ನಮ್ಗೂ ಅದ್ರಷ್ಟ ಬಂದೇ ಬರುತ್ತೆ. ಆಗ ಕೈತುಂಬ ಹಣ, ಬೆಂಜ್ ಕಾರು,ಅರಮನೆಯಂತಹ ಬಂಗಲೆ, ಹಾಲ್ ನಲ್ಲಿ ನಮ್ಮಿಬ್ಬರ ದೊಡ್ಡ ದೊಡ್ಡ ಫೊಟೊ"
 
   ಪ್ರೊಡ್ಯುಸರ್ ಆಗಿ ಬಂದಿದ್ದ ನಾಯಕ ತಾನು ತೆಗೆಯುತ್ತಿರುವ ಸಿನೆಮಾದ ಕ್ಲೈಮೆಕ್ಷ್ ದೃಶ್ಯವನ್ನು ನಾಯಕಿಗೆ ತೋರಿಸುವಾಗ, ದೃಶ್ಯ ವೀಕ್ಷಿಸಲು ಬಂದಿದ್ದ ನಾಯಕಿ ಮತ್ತು ಅವಳ ಗೆಳೆಯ ಹೊರಗೆ ಓಡಿ ಬರುತ್ತಾರೆ.ಯಾಕೆಂದರೆ ಅದು ನಾಯಕಿಯ ಗಂಡನನ್ನು ರೈಲಿನಿಂದ ಹೊರಗೆ ದೂಡುವ ದ್ರಶ್ಯ.ಆ ದ್ರಶ್ಯದಲ್ಲಿ ಇರುವವರು ತನ್ನ ಗಂಡ ಮತ್ತು ತನ್ನ ಗಂಡನನ್ನು ರೈಲಿನಿಂದ ಹೊರಗೆ ದೂಡುವವನು ತನ್ನೊಟ್ಟಿಗೆ  ಕುಳಿತುಕೊಂಡು ಸಿನೆಮಾದ ಕ್ಲೈಮೆಕ್ಸ್ ವೀಕ್ಷಿಸುತ್ತಿದ್ದ ತನ್ನ ಗಂಡನ ಗೆಳೆಯ.

 ನಾನು ಕತೆ ಪೂರ್ತಿ ಹೇಳೊಲ್ಲ... ಯಾಕೆಂದರೆ ಸಿನೆಮಾ ನೋಡುವ ನಿಮಗೂ ಸ್ವಲ್ಪ ಕುತೂಹಲ ಇರಲಿ. ನೀವೂ ಒಮ್ಮೆ ಈ ಸಿನೆಮಾ ನೋಡಿ.

ಭಾನುವಾರ, ಅಕ್ಟೋಬರ್ 6, 2013

ಕಳೆದೇ ಹೋದವು ಆ ದಿನಗಳು, ಗಂಟೆಗಳು, ಕ್ಷಣಗಳು

ಹತ್ತು ದಿನಗಳ ಎನ್.ಎಸ್..ಎಸ್. ಶಿಬಿರದ ಒಂದು ನೆನಪು.

ಹರ್ಷೋಲ್ಲಾಸದಿಂದ ಕಳೆದೆವು ನಾವು
ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು,
ಅಜಾಜ್ ಅಹಮ್ಮದ್ ನೇತೃತ್ವ, ವನಿತ, ಕೃಷ್ಣ, ಗಂಗಾಧರರು
ಇದ್ದರು ನಮ್ಮೊಂದಿಗೆ ನಗುತ್ತಾ ನಗಿಸುತ್ತಾ

                                 ಚಿತ್ರ: ಸಂತೋಷ್ ಜಿ.ಶೆಟ್ಟಿ

ಒಂದೇ ಗಿಡದಲ್ಲಿ ಅರಳಿದ ನೂರಾರು ಮಲ್ಲಿಗೆಗಳಂತೆ
ಕೆಲಸವ ಮಾಡುತ್ತಿದ್ದರು ನಮ್ಮ ಗೆಳೆಯರು
ಪರಸ್ಪರ ಅಣ್ಣ-ತಮ್ಮಂದಿರಂತೆ, ಅಕ್ಕ-ತಂಗಿಯರಂತೆ,

ಸುಪ್ತಪ್ರತಿಭೆಗಳ ಬಾಗಿಲುತೆರೆದು
ಮನರಂಜಿಸಿದರು ನಮ್ಮ ಗೆಳೆಯರು ಅಂದು
ನೃತ್ಯದಲ್ಲಿ, ಸಂಗೀತದಲ್ಲಿ, ನಟನೆಗಳಲ್ಲಿ

                                       ಚಿತ್ರ:ಚಂದ್ರಶೇಖರ್ ಈಶ್ವರ್ ನಾಯ್ಕ್

ಗಂಗಾಧರರ ಕ್ವಿಜ್ ಸ್ಪರ್ಧೆ
ಜೀವನವೆಂಬ ಪುಸ್ತಕದಲ್ಲಿ ಕಲಿಯಲು ಇನ್ನೂ ಇದೆ ಎನ್ನುತ್ತಿದ್ದರೆ,
ವನಿತರ ಅಂತ್ಯಾಕ್ಷರಿಯು
ಈ ಶಿಬಿರ ಅಂತ್ಯವಾಗದೆ ಮುಂದುವರೆಯುವಂತೆ ಹೇಳುತ್ತಿತ್ತು.

ರೆಂಜಾಳರ ಯೋಚನೆಗಳು
ನಮ್ಮನ್ನು ಭವಿಷ್ಯದ ಬಗ್ಗೆ ಯೋಚಿಸುವಂತೆ ಹೇಳುತ್ತಿದ್ದರೆ,
ಮಹಮ್ಮದಾಲಿಯವರು ದೈಹಿಕ ಶಿಕ್ಷಣದಿಂದ ನಮ್ಮನ್ನು ರಂಜಿಸಿದ್ದರು

ಪ್ರಪಂಚವನ್ನೇ ಮರೆತ್ತಿದ್ದರೂ ಕೆಲವರು
ಹುಟ್ಟುಹಬ್ಬವ ಮರೆಯದೆ ಆಚರಿಸುತ್ತಿದ್ದರು
ಉಲ್ಲಾಸದಿಂದ, ಸಂಭ್ರಮದಿಂದ, ಸಂತೋಷದಿಂದ,

                                       ಚಿತ್ರ:ಚಂದ್ರಶೇಖರ್ ಈಶ್ವರ್ ನಾಯ್ಕ್

ಸೂರ್ಯನ ಬಿಸಿಲಿಗೂ ಬಿಳಿಯಾಗೇ ಇದ್ದ ಮುಖಗಳು
ಬೇಸರದಿಂದ ತೊಳೆದ ಕೆಂಡದಂತ್ತಿದ್ದವು ಆ ಕೊನೆಯ ದಿನ
ಕಳೆದೇ ಹೋದವು ಎಂದಿಗೂ ನೆನಪಿಡಬೇಕಾದ
ಆ ದಿನಗಳು, ಗಂಟೆಗಳು, ಕ್ಷಣಗಳು.