ಶುಕ್ರವಾರ, ಅಕ್ಟೋಬರ್ 11, 2013

ಆಸೆಯ ಬಲೆ

   ಮೊನ್ನೆ ನನ್ನ ಸ್ನೇಹಿತ ರಶಿಧ್ ತನ್ನಲ್ಲಿ ಉಳಿದಿರುವ ಸುಮಾರು 15GBಯಷ್ಟು ಇಂಟರ್ನೆಟ್ ಬ್ಯಾಲೆನ್ಸ್ ನಲ್ಲಿ ಯಾವುದಾದರೂ ಒಳ್ಳೆಯ ಹಳೆಯ ಸಿನೆಮಾ ಡೌನ್ಲೋಡ್ ಮಾಡೋಣ ಅಂದ. ಆಗ ನಮಗೆ ನೆನಪಿಗೆ ಬಂದದ್ದು ವಿಷ್ಣುವರ್ಧನ್ ಮತ್ತು ಜೈಜಗದೀಶ್ ಒಟ್ಟಿಗೆ ಅಭಿನಯಿಸಿದ ಒಂದು ಹಳೆಯ ಚಿತ್ರ. ಆದರೆ  ಅದರ ಹೆಸರು ಗೊತ್ತಿಲ್ಲ. ರಶಿಧ್ ಇಂಟರ್ನೆಟ್ನಲ್ಲಿ ಹುಡುಕಲು ಶುರು ಮಾಡಿದ  ಸಿನೆಮಾ ಹೆಸರೇನೋ ಸಿಕ್ಕಿತು ಆದರೆ ಸಿನೆಮಾ ಡೌನ್ ಲೋಡ್ ಮಾಡಲು ಸಿಗಲಿಲ್ಲ.
1989ನೆ ಇಸವಿ ಇರಬಹುದು ನಮ್ಮ ಊರಲ್ಲಿ ಆಗ ಒಬ್ಬರ ಮನೆಯಲ್ಲಿ ಮಾತ್ರ ಇದ್ದದ್ದು ಸಣ್ಣ ರೇಡಿಯೋ ಗಾತ್ರದ ಬ್ಲಾಕ್ ಆಂಡ್ ವೈಟ್ ಟಿ.ವಿ. ಆ ಸಮಯದಲ್ಲಿ ನಾವು ಈಗ ನೆನಪು ಮಾಡಿಕೊಂಡ ಸಿನೆಮಾವನ್ನು ಒಂದು ಸಂಜೆ ಸಿಡಿಲಿನೊಂದಿಗೆ ಮಳೆ ಬರುತ್ತಿದ್ದ ಸಮಯದಲ್ಲಿ ನಿಮಿಷಕ್ಕೊಂದು ಜಾಹಿರಾತುಗಳ ಮಧ್ಯೆ ಅರ್ಧಂಬರ್ದ ನೋಡಿದ್ದೆ. ಅಂದಿನಿಂದ ಇಂದಿನವರೆಗೆ ನನಗೆ ಈ ಸಿನೆಮಾ ನೋಡಲಾಗಲೇ ಇಲ್ಲ. ಇಂದೇಕೋ ಅಂದು ಅರ್ಧಂಬರ್ದ ನೋಡಿದ ಸಿನೆಮಾದ ನೆನಪು ಮನಸ್ಸಿನ ದಡಕ್ಕೆ ಬಂದು ಅಪ್ಪಳಿಸಿತ್ತು.ಇಲ್ಲಿ ಹತ್ತಿರದಲ್ಲಿ ಎಲ್ಲೂ 26 ವರ್ಷದಷ್ಟು ಹಳೆಯ ಕನ್ನಡ ಸಿನೆಮಾದ ಸಿ.ಡಿ. ಸಿಗದ್ದಿದ್ದರಿಂದ ಇಂಟರ್ನೆಟ್ ನಲ್ಲಿ ಸಿ.ಡಿ. ಅಂಗಡಿಯ ಫೋನ್ ನಂಬ್ರ ಹುಡುಕಿ  ಬೆಂಗಳೂರಿನಿಂದ ವಿ.ಪಿ.ಪಿ. ಮೂಲಕ ಸಿ.ಡಿ.ತರಿಸಿ, ಲ್ಯಾಪ್ ಟಾಪ್ ಮೂಲಕ ಸಿನೆಮಾ ನೋಡಲು ಕುಳಿತೆವು.

   ಇಂಗ್ಲೆಂಡ್ ನಿಂದ ಬಂದ ಸಿನೆಮಾ ನಾಯಕನ  ಗೆಳೆಯ ನಾಯಕ ಮತ್ತು ನಾಯಕಿಯನ್ನು ಮುಂಬಯಿಗೆ ಸುತ್ತಾಡಿಸಲು ರೈಲಿನಲ್ಲಿ ಹೋಗುತ್ತಿರುವಾಗ ನಾಯಕನನ್ನು ರೈಲಿನ ಬಾಗಿಲಿಂದ ಹೊರಗೆ ದೂಡುತ್ತಾನೆ. ಹಣ, ಕೀರ್ತಿಯ ವ್ಯಾಮೋಹಕ್ಕೆ ಒಳಗಾಗಿದ್ದ ನಾಯಕಿ ತನ್ನ ಗಂಡನ ಸ್ನೇಹಿತ ತನ್ನೊಟ್ಟಿಗಿದ್ದು ತನಗೆ ತನ್ನ ಆಕಾಂಕ್ಷೆಗಳನ್ನು ಈಡೇರಿಸಲು ಸಹಾಯವಾಗಬಹುದಾದ್ದರಿಂದ ತನ್ನ ಗಂಡನನ್ನು ಕಳೆದುಕೊಂಡರೂ ಯಾವುದೇ ನೋವು ಅನುಭವಿಸುವುದಿಲ್ಲ. ಬಹಳ ವರ್ಷಗಳ ಹಿಂದೆ ಮೈಸೂರು ದಸರಾ ಸಂದರ್ಭದಲ್ಲಿ ತಮ್ಮ ಐದು ವರ್ಷದ ಮಗ ಕಣ್ಮರೆಯಾಗಿದ್ದ ದಂಪತಿಗೆ ಕಾರಲ್ಲಿ ಬರುತ್ತಿರುವಾಗ, ರೈಲಿನಿಂದ ಬಿದ್ದು ಒದ್ದಾಡುತ್ತಿರುವ ನಾಯಕ ಸಿಕ್ಕಿ ಇವನೇ ನಮ್ಮ ಮಗ ಎಂದು ಸ್ವೀಕರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಒಂದು ದಿನ ಕಾರ್ ಆಕ್ಸಿಡೆಂಟ್ ಆಗಿ ತನ್ನ ಹಿಂದಿನ ಎಲ್ಲಾ ನೆನಪುಗಳು ಕಣ್ಣಮುಂದೆ ಬಂದು ನಾಯಕ ತನ್ನ ಸೂಟ್ ಕೇಸ್ ನೊಂದಿಗೆ ಮದ್ರಾಸ್ ಗೆ ಹೋಗುತ್ತಾನೆ. ಮದಾಸಿನಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ತನ್ನ ಹೆಂಡತಿ ನಟಿಸಿದ ಸಿನೆಮಾ 'ಪತಿವೃತಾ'ದ ದೊಡ್ಡ ಪೊಸ್ಟರ್ ಗಳನ್ನು ಒಂದು ಕ್ಷಣ ಹಾಗೆಯೇ ನಿಂತು ನೋಡುತ್ತಾನೆ.ಪತಿವೃತಾ ಸಿನೆಮಾದ ಡೈರೆಕ್ಟರನ್ನು ಭೇಟಿಯಾದ ನಾಯಕ ತಾನೊಬ್ಬ ಸಿನೆಮಾ ಪ್ರೊಡ್ಯುಸರ್ ಎಂದು, ತಾನು ತೆಗೆಯುತ್ತಿರುವ ಸಿನೆಮಾಕ್ಕೆ 'ಪತಿವೃತಾ' ಸಿನೆಮಾದ ನಾಯಕಿಯೇ ನಾಯಕಿಯಾಗಿ ಬರುವಂತೆ ಒಪ್ಪಿಸುತ್ತಾನೆ.ಸಿನೆಮಾದ ಕತೆ ಕೇಳಲು ಬಂದ ನಾಯಕಿಗೆ ತನ್ನ ಗಂಡನ ಮುಖವನ್ನು ಹೋಲುತ್ತಿರುವ ವ್ಯಕ್ತಿಯನ್ನು ಕಂಡು ಒಂದು ಕ್ಷಣ ದಿಗ್ಭ್ರಮೆ, ಆತಂಕ. ಆ ವ್ಯಕ್ತಿಯನ್ನೇ ನೋಡುತ್ತಾ ನಿಂತ ನಾಯಕಿಯನ್ನು ಕುರಿತು ನಾಯಕ ಕೇಳುತ್ತಾನೆ.

"ಏನ್ ಆ ತರಹ ನೋಡುತ್ತಿದ್ದೀರಾ ಮಿಸ್ ಮೀನಾದೇವಿ.ರಾತ್ರಿ ಹೊತ್ತಲ್ಲೂ ಯಾಕೆ ಕೂಲಿಂಗ್ ಗ್ಲಾಸ್ ಹಾಕ್ ಕೊಂಡಿದ್ದೇನೆ ಎಂದು ಆಶ್ಚರ್ಯವಾಗುತ್ತಿದೆಯಾ ? ಈ ಬಣ್ಣದ ಪ್ರಪಂಚದಲ್ಲಿ ಕಪ್ಪು ಬಣ್ಣ ಅಂತ ಒಂದಿದೆ ಆ ಬಣ್ಣ ಈ ಗ್ಲಾಸಲ್ಲಿ ಬಹಳ ಚೆನ್ನಾಗಿ ಕಾಣುತ್ತೆ.ಪ್ರಕಾಶಮಾನವಾದ ಯಾವುದೇ ಬಣ್ಣವನ್ನು ನೋಡಲು ಈ ಕಣ್ಣು ಇಷ್ಟಪಡುವುದಿಲ್ಲ."
ಡೈರೆಕ್ಟರ್ ನಾಯಕಿಯನ್ನುದ್ದೇಶಿಸಿ, ಇವರು ಕತೆನೂ ಬರೆಯುತ್ತಾರೆ ಕತೆ ಮಾತ್ರವಲ್ಲ ಏನನ್ನೂ ಬೇಕಾದರೂ ಬರೆಯುತ್ತಾರೆ ಅನ್ನುತ್ತಾನೆ.
"ಇಲ್ಲ ಕತೆ ಮಾತ್ರ ಬರೆಯುತ್ತೇನೆ. ಮನುಷ್ಯನ ಹಣೆಬರಹ ಬರೆಯಲು ನನ್ನಿಂದ ಸಾಧ್ಯವಿಲ್ಲವೆನ್ನುತ್ತಾನೆ.
"ಇಲ್ಲಿ ನೀವು ಒಬ್ಬರೇ ಇದ್ದೀರಾ ?"ನಾಯಕಿಯ ಕುತೂಹಲದ ಪ್ರಶ್ನೆ.
"ಅಂದರೆ ಅ...ಅಹ.. ಈಗ ಅರ್ಥಯಾಯ್ತು. ನೀವು ನನ್ನ ಹೆಂಡತಿಯ ಬಗ್ಗೆ ಕೇಳುತ್ತಿದ್ದೀರಾ. ಹೌದು ಮೀನಾ ದೇವಿ ನನಗೆ ಮದುವೆಯಾಗಿತ್ತು. ಆದರೆ ನನ್ನ ಹೆಂಡತಿ ಮದುವೆಯಾದ ಮೊದಲನೆಯ ರಾತ್ರಿಯೇ ಸತ್ತು ಹೋದ್ಲು."
"ಮೊದಲನೆಯ ರಾತ್ರಿನಾ ?"
"ಅಹ್..ಅಹ...ಅಹ..ಮೊದಲನೇ ರಾತ್ರಿ."
"ಮತ್ತೆ ನೀವ್ ನಗ್ತಾ ಇದ್ದೀರಾ ?"
"ಜೀವನದಲ್ಲಿ ಇಷ್ಟು ದೊಡ್ಡ ತಮಾಷೆ ನೋಡಿದ ಮೇಲೆ ನಗ್ದೆ ಏನ್ ಮಾಡ್ಲಿ ಮೀನಾದೇವಿ"

ಬಿಳಿ ಪಾಯ್ ಜಾಮ್, ಗಡ್ಡ ಬಿಟ್ಟ ಕೂಲಿಂಗ್ ಗ್ಲಾಸ್ ಹಾಕಿಕೊಂಡಿರುವ ಪ್ರೊಡ್ಯೂಸರ್ ಗೆಟಪ್ ನಲ್ಲಿರುವ ನಾಯಕ ತಾನು ತೆಗೆಯಬೇಕೆಂದಿರುವ ಸಿನೆಮಾದ ಕತೆ ಹೀಗೆ ಹೇಳುತ್ತಾನೆ.

 "ಈ ಕತೆಯ ಹೀರೊ ಮಿಡ್ಲ್ ಕ್ಲಾಸಿಗೆ ಸೇರಿದವನು. ರಸಿಕ. ಹೀರೋಯಿನ್ ಗಾಯಕಿಯ ಒಂದು ಪ್ರೋಗ್ರಾಮಲ್ಲಿ ಹಾಡ್ ಕೇಳಿ ಹೀರೋ ಬೆರಗಾದ.ಅವಳ ಅಂದಕೆ ಮರುಳಾದ.ಈಕೆನೇ ನನ್ನ ಹೆಂಡ್ತಿ ಆಗಬೇಕೆಂದು ಆಸೆಪಟ್ಟ.ಆದರೆ ಹೀರೋಯಿನ್ ಗೆ ಈ ಮದುವೆ ಇಷ್ಟವಿರಲಿಲ್ಲ.ಯಾಕೆಂದರೆ ಅವಳಿಗೆ ಕೀರ್ತಿಯಾಸೆ, ಐಶ್ವರ್ಯದ ಅಸೆ. ಸದಾ ಅಸೆ ಬಲೆಗೆ ಸಿಕ್ಕಿ ಬಂಗಾರದ ಜಿಂಕೆಯ ಹಿಂದೆ ಓಡೋ ಹೆಣ್ಣು. ಹೇಗೂ ಅಪ್ಪ ಅಮ್ಮನ ಬಲವಂತಕೆ ಒಪ್ಪಿ ಮದುವೆಯಾದಳು.ಆದರೆ ಜೀವನದಲ್ಲಿ ತಾನೂ ಸುಖಪಡಲಿಲ್ಲ ಗಂಡನಿಗೂ ಸುಖಕೊಡಲಿಲ್ಲ.ಆಕಾಶದಲ್ಲಿ ಹಾರಾಡುತ್ತಿದ್ದ ಅರಗಿಣಿನ ಬಲೆ ಬೀಸಿ ಹಿಡಿದು ನನ್ನ ಭವಿಷ್ಯನೇ ಹಾಳು ಮಾಡಿದೆ ಅಂತ  ಹೇಳುತ್ತಿದ್ಲು. ಬೈತಾ ಇದ್ಲು.ಅವಳು ಎಷ್ಟೇ ಅವಮಾನ ಮಾಡಿದ್ರೂ ಗಂಡ ಸಹಿಸ್ಕೊಳ್ತಾ ಇದ್ದ. ಯಾಕೆಂದರೆ ಅವನಿಗೆ ಹೆಂಡ್ತಿಯಂದ್ರೆ ಪಂಚಪ್ರಾಣ.ಅವಳ ಆನಂದಕ್ಕೋಸ್ಕರ ಎಂತಹ ತ್ಯಾಗ ಮಾಡುವುದಕ್ಕೂ ಸಿದ್ದವಾಗಿದ್ದ."
"ಈ ಕತೆ ಯಾರದ್ದು ?" ಕತೆ ಕೇಳುತ್ತಿದ್ದ ನಾಯಕಿಯ ಉದ್ವೇಗದ ನುಡಿ.
"ಯಾಕೆ ಮೀನಾದೇವಿಯವರೆ ನನ್ ಕತೆ ನನ್ನ ಸ್ವಂತ ಕತೆ. ಜೀವನದಲ್ಲಿ ನಾ ಬರೆದಿರುವ ಒಂದೇ ಒಂದು ಕತೆ. ಆಂ..ಮುಂದೆ ಕೇಳಿ (ಪ್ರೊಡ್ಯುಸರ್ ತನ್ನ ಕೈಯಲ್ಲಿದ್ದ ಜ್ಯೂಸ್ ನ ಒಂದು ಗುಟುಕು ಹೀರಿ ಮುಂದುವರಿಸಿದ)ಆದರೆ ಅವಳಿಗೆ ತಾಯಿಯಾಗುವುದಕ್ಕೆ ಇಷ್ಟವಿರಲಿಲ್ಲ.ವಿಧಿ ಇಲ್ಲ. ಅವಳಿಗಾದ ನಿರಾಶೆ ಎಲ್ಲಾ ತಡ್ಕೊಂಡ್ಲು. ಹೀಗಿರುವಾಗ ಒಂದು ದಿವಸ  ಹೀರೋ ಸ್ನೇಹಿತ ಫಾರಿನ್ ನಿಂದ ಬಂದ. ಅವನಿಗೆ ಹೀರೋಹಿನ್ ಪರಿಚಯವಾಯ್ತು.ಅವಳ ಅಂದ ಚಂದಕೆ ಅವನು ಮಾರು ಹೋದ. ಅವರ ಸಂಸಾರಕೆ ಸಹಾಯ ಮಾಡೋಕೆ ಬಂದ ತರಹ ನಾಟಕವಾಡಿದ. ನಿಧಾನವಾಗಿ ಹಿರೋಹಿನ್ ಜೊತೆ ಸಲುಗೆ ಬೆಳೆಸಿಕೊಂಡ."
ಒಮ್ಮೆಲೆ ಕುಳಿತಲ್ಲಿಂದ ಎದ್ದು ನಿಂತು ಕೊಂಡ ನಾಯಕಿಯ ಕೈಯಲ್ಲಿದ್ದ ಜ್ಯೂಸ್ ನ ಗ್ಲಾಸ್ ಕೆಳಗೆ ಬಿದ್ದು ಪುಡಿ ಪುಡಿಯಾಗುತ್ತದೆ.
"ಅರೆ ಏನಾಯ್ತು ಮೀನಾದೇವಿ.ಪರ್ವಾಗಿಲ್ಲ ನಾನ್ ಬೇರೆ ತರ್ತೀನಿ."
ನಾಯಕಿ ಅಲ್ಲಿಂದ ಹೊರಡಲು ಅನುವಾಗುತ್ತಾಳೆ.
"ಯಾಕೆ ಪೂರ್ತಿ ಕೇಳುವುದಿಲ್ವ ?"
"ನನ್ಗೆ ತಲೆ ನೋಯ್ತಿದೆ.ಇಫ್ ಯು ಡೋಂಟ್ ಮೈಂಡ್ ನಾ ಬರ್ತೀನಿ."ಇದು ಸಿನೆಮಾದ ಕತೆಯ ಸಣ್ಣ ಭಾಗ. ಸಿನೆಮಾ ತುಂಬಾ ವರ್ಷಗಳ ಹಿಂದಿನದಾದರೂ, ಈಗಲೂ ಒಮ್ಮೆ ನೋಡಿದರೂ ಮತ್ತೊಮ್ಮೆ ನೋಡುವಷ್ಟು ಇಷ್ಟವಾಗುತ್ತದೆ.ಅಂದ ಹಾಗೆ ನಾನು ಸಿನೆಮಾದ ಹೆಸರನ್ನೇ ಹೇಳಿಲ್ಲ. ಸಿನೆಮಾದ ಹೆಸರು "ಆಸೆಯ ಬಲೆ".
 ಒಂದು ದಿನ ಬಿಟ್ಟು ಸಿನೆಮಾ ನಾಯಕಿಯ ಮನೆಗೆ ಬಂದ ಪ್ರೊಡ್ಯುಸರ್ ಆಗಿ ನಟಿಸುತ್ತಿದ್ದ ನಾಯಕ ಮನೆಯ ದೊಡ್ಡ ಹಾಲ್ ನಲ್ಲಿರುವ ಎರಡು ದೊಡ್ಡ ದೊಡ್ಡ ಫೊಟೊಗಳನ್ನು ಗಮನಿಸುತ್ತಾನೆ. ಆ ಎರಡು ಫೊಟೊಗಳಲ್ಲಿ ಒಂದು ತನ್ನ ಹೆಂಡತಿಯ ಫೊಟೊ ಆಗಿದ್ದರೆ, ಮತ್ತೊಂದು ತನ್ನ ಗೆಳೆಯನದ್ದಾಗಿರುತ್ತದೆ. ಆಗ ನಾಯಕ ತನ್ನ ಹೆಂಡತಿ ಹಿಂದೆ ಹೇಳಿದ್ದ ಕೆಳಗಿನ ವಾಕ್ಯವನ್ನು ನೆನಪಿಸಿಕ್ಕೊಳ್ಳುತ್ತಾನೆ.
"ಕಾಲ ಹೀಗೆ ಇರೊಲ್ಲಾರಿ ಒಂದಲ್ಲ ಒಂದು ದಿನ ನಮ್ಗೂ ಅದ್ರಷ್ಟ ಬಂದೇ ಬರುತ್ತೆ. ಆಗ ಕೈತುಂಬ ಹಣ, ಬೆಂಜ್ ಕಾರು,ಅರಮನೆಯಂತಹ ಬಂಗಲೆ, ಹಾಲ್ ನಲ್ಲಿ ನಮ್ಮಿಬ್ಬರ ದೊಡ್ಡ ದೊಡ್ಡ ಫೊಟೊ"
 
   ಪ್ರೊಡ್ಯುಸರ್ ಆಗಿ ಬಂದಿದ್ದ ನಾಯಕ ತಾನು ತೆಗೆಯುತ್ತಿರುವ ಸಿನೆಮಾದ ಕ್ಲೈಮೆಕ್ಷ್ ದೃಶ್ಯವನ್ನು ನಾಯಕಿಗೆ ತೋರಿಸುವಾಗ, ದೃಶ್ಯ ವೀಕ್ಷಿಸಲು ಬಂದಿದ್ದ ನಾಯಕಿ ಮತ್ತು ಅವಳ ಗೆಳೆಯ ಹೊರಗೆ ಓಡಿ ಬರುತ್ತಾರೆ.ಯಾಕೆಂದರೆ ಅದು ನಾಯಕಿಯ ಗಂಡನನ್ನು ರೈಲಿನಿಂದ ಹೊರಗೆ ದೂಡುವ ದ್ರಶ್ಯ.ಆ ದ್ರಶ್ಯದಲ್ಲಿ ಇರುವವರು ತನ್ನ ಗಂಡ ಮತ್ತು ತನ್ನ ಗಂಡನನ್ನು ರೈಲಿನಿಂದ ಹೊರಗೆ ದೂಡುವವನು ತನ್ನೊಟ್ಟಿಗೆ  ಕುಳಿತುಕೊಂಡು ಸಿನೆಮಾದ ಕ್ಲೈಮೆಕ್ಸ್ ವೀಕ್ಷಿಸುತ್ತಿದ್ದ ತನ್ನ ಗಂಡನ ಗೆಳೆಯ.

 ನಾನು ಕತೆ ಪೂರ್ತಿ ಹೇಳೊಲ್ಲ... ಯಾಕೆಂದರೆ ಸಿನೆಮಾ ನೋಡುವ ನಿಮಗೂ ಸ್ವಲ್ಪ ಕುತೂಹಲ ಇರಲಿ. ನೀವೂ ಒಮ್ಮೆ ಈ ಸಿನೆಮಾ ನೋಡಿ.

6 ಕಾಮೆಂಟ್‌ಗಳು:

 1. ನನ್ನ ಆಸಕ್ತಿಯನ್ನು ಕೆರಳಿಸಿದ್ದೀರಿ. ಇದೀಗ ನಾನೂ ಈ ಸಿನೆಮಾವನ್ನು ನೋಡಲೇ ಬೇಕಾಯಿತು!

  ಪ್ರತ್ಯುತ್ತರಅಳಿಸಿ
 2. ಸುನಾತ್ ರವರೆ ಮತ್ತು ಮಾಲತಿ ಅಕ್ಕ ಖಂಡಿತ ಇದು ನೋಡಲೇ ಬೇಕಾದ ಕುತೂಹಲಕಾರಿ ಸಿನೆಮಾ.

  ಪ್ರತ್ಯುತ್ತರಅಳಿಸಿ
 3. ಈ ಸಿನೆಮ ಎಲ್ಲೋ ನೋಡಿದ ನೆನಪು ಆದ್ರೆ ಅಂತ್ಯ ನೆನಪಾಗುತ್ತಿಲ್ಲ ...
  ನೋಡೋಣ ಮತ್ತೊಮ್ಮೆ... ಹೇಗೂ ವಿಷ್ಣು ಸಿನೆಮಾ. ಚೆನ್ನಾಗಿದೆ

  ಪ್ರತ್ಯುತ್ತರಅಳಿಸಿ
 4. ನನಗೆ ಗೊತ್ತಿರುವಂತೆ ಈ ಚಿತ್ರಕ್ಕೆ ನನ್ನ ಗುರುಗಳಾದ ಡಿ.ವಿ. ರಾಜಾರಾಂ ಅವರ ಛಾಯಾಗ್ರಹಣವಿತ್ತು. ಚಿತ್ರದ opening title ನೋಡಿ confirm ಮಾಡ್ತೀರಾ pl.

  ಪ್ರತ್ಯುತ್ತರಅಳಿಸಿ
 5. ಈ ಸಿನೆಮಾವನ್ನು ಮತ್ತೊಮ್ಮೆ ನೋಡಿ ಸ್ವರ್ಣರವರೆ.ಅಂತ್ಯ ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ