ಗುರುವಾರ, ಅಕ್ಟೋಬರ್ 31, 2013

ಮೊದಲ ಹಣತೆ ನಮ್ಮ ಮನೆಯಲ್ಲೇ ಬೆಳಗಲಿ

ನನ್ನ ನಾದಿನಿಯರು
 ಸೂರ್ಯ ಚಂದ್ರರು ಕಂತಿಹೋದಾಗ ಪುಟ್ಟದೊಂದು ಹಣತೆ ತಾನು ಬೆಳಕು ನೀಡುವೆನೆಂದು ಮುಂದೆ ಬರುತ್ತದೆ. ಬತ್ತಿಯನ್ನು ಸುಟ್ಟುಕೊಳ್ಳುತ್ತಾ ತನ್ನ ಸುತ್ತಲಿನ ಕತ್ತಲೆಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಅದರಂತೆ  ಇತರರಿಗಾಗಿ  ಬದುಕುವುದರಲ್ಲೇ  ಸಾರ್ಥಕತೆ  ಅಡಗಿದೆ. ಹಣತೆ ಬತ್ತಿಯನ್ನು ಸುಟ್ಟುಕೊಳ್ಳುವಂತೆ, ನಾವು ನಮ್ಮ ಮಿಥ್ಯಾಹಂಕಾರವನ್ನು ಸುಟ್ಟುಕೊಳ್ಳಬೇಕು. ಈ ಬೋಧೆಯನ್ನು ದೀಪಾವಳಿಯ ಹಣತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಈ ಒಳಹೂರಣವನ್ನು ಅರಿತುಕೊಂಡು ಸಹಬಾಳ್ವೆಯ ಸವಿಗೆ ದೀಪ ಹಚ್ಚೋಣ.
 


   ಅಶ್ವಯಜ ಮಾಸದ ಕೊನೆಯರ್ಧ. ಬಹುತೇಕ ಅಕ್ಟೋಬರ್ ತಿಂಗಳು. ಸಂಜೆಗತ್ತಲು ಬೇಗನೆ ಆಗಿ ಇರುಳು ದೀರ್ಘವಾಗುತ್ತದೆ. ಆ ಮಾಸ ಮುಗಿದು ಇನ್ನೇನು ಕಾರ್ತೀಕಕ್ಕೆ ಸ್ವಾಗತ ಕೋರಬೇಕು... ತ್ರಯೋದಶಿಯ ದಿನದಿಂದಲೇ ಸಿದ್ದತೆ ಶುರು. ಮಕ್ಕಳಿಗೆ ಪಟಾಕಿ ಹಬ್ಬ. ಮಹಿಳೆಯರಿಗೆ ಕಜ್ಜಾಯ ಹಬ್ಬ. ಹೀಗೆ ಒಂದೊಂದು  ಹೆಸರಿನೊಂದಿಗೆ, ತಿಂಡಿಯೊಂದಿಗೆ ದೀಪಾವಳಿ ತಳುಕು ಹಾಕಿಕೊಂಡಿದೆ. ದೀಪಾವಳಿಗೆ  ಬಟ್ಟೆಗಳು ವಾರ್ಡ್ರೋಬ್ ಗಳಲ್ಲಿ ಹೊಳೆಯುತ್ತಿರುತ್ತದೆ. ದೊಡ್ಡವರಿಗಾದರೆ ಶರ್ಟು-ಪಂಚೆ, ಮಹಿಳೆಯರಿಗಾದರೆ ಬಗೆ ಬಗೆಯ ರೇಷ್ಮೆ  ಸೀರೆಗಳು, ಹದಿಹರೆಯದ ಹುಡುಗಿಯರಿಗೆ ಲಂಗಾ-ದಾವಣಿ, ಅದು ಬಿಟ್ಟರೆ ಚೂಡಿದಾರ್. 

   
  ದೀಪಾವಳಿ  ಹಬ್ಬವನ್ನು ಉತ್ತರ ಭಾರತೀಯರು ಐದು ದಿನಗಳಲ್ಲಿಯೂ, ದಕ್ಷಿಣ ಭಾರತೀಯರು ಮೂರು ದಿನಗಳಲ್ಲಿಯೂ ವಿಶೇಷ ಪೂಜೆಗಳಿಂದ ಆಚರಿಸುತ್ತಾರೆ. ಒಟ್ಟಿನಲ್ಲಿ ಪ್ರಥಮ ದಿನವಾದ ಬಹುಳ ತ್ರಯೋದಶಿಯಿಂದ ತೊಡಗಿ ಐದನೇ ದಿನವಾದ ಯಮದ್ವಿತೀಯವರೆಗೆ ದೀಪಾವಳಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ಹದಿನೈದು ದಿನಗಳ ನಂತರ ಬರುವ ತುಳಸೀ ಪೂಜೆಯೊಂದಿಗೆ ಈ ಆಚರಣೆಯು ಮುಗಿಯುತ್ತದೆ.

   ದಕ್ಷಿಣ ಭಾರತೀಯರು ನರಕ ಚತುರ್ದಶಿ, ಅಮಾವಾಸ್ಯೆ ( ಲಕ್ಷ್ಮೀಪೂಜೆ) ಮತ್ತು ಬಲಿ ಪಾಡ್ಯಮಿ ಎಂದು ಮೂರು ದಿನ ಆಚರಿಸಿದರೆ, ಉತ್ತರ ಭಾರತೀಯರು ಈ ಮೂರುದಿನಗಳ ಮೊದಲು ಧನ್ ತೇರಾಸ್ ಎಂದೂ, ಈ ಮೂರು ದಿನಗಳ ಮರುದಿನ ಯಮದ್ವಿತೀಯ (ಭಾಯಿ ದೂಜ್) ಎಂದೂ ಆಚರಿಸುತ್ತಾರೆ.

   ತ್ರಯೋದಶಿ ದಿನವು ಧನ್ ತೇರಾಸ್ ಎಂಬ ನಾಮದಿಂದ ಕರೆಯಲ್ಪಡುತ್ತಿದ್ದು, ಯಮರಾಜ ಮತ್ತು ಧನ್ವಂತರಿಯ ಐತಿಹ್ಯದೊಂದಿಗೆ ಕೊಂಡಿಯನ್ನಿರಿಸಿಕೊಂಡಿದೆ.ಅವತ್ತು ನೀರು ತುಂಬುವ ಹಬ್ಬ. ಆಕಾಶ ಬುಟ್ಟಿ ಚಾವಡಿಯ ಛಾವಣಿಗೆ ಜೋತುಬೀಳುತ್ತದೆ. ಯಾರು ಎಷ್ಟು ಕಲಾತ್ಮಕವಾಗಿರುವುದನ್ನು ಆಯ್ದು ತರುತ್ತಾರೆ ಅನ್ನುವುದೊಂದು ಪೈಪೋಟಿಯೇ ನಡೆದು ಹೋಗುತ್ತದೆ. ಪ್ರಭಾತ ವೇಳೆಯಲ್ಲಿ ಹೆಂಗಳೆಯರು ಮನೆ ಪರಿಸರವನ್ನು ಶುಚಿಗೊಳಿಸಿ, ಮುಂಬಾಗಿಲನ್ನು ತಳಿರು ತೋರಣಗಳಿಂದ ಶೃಂಗರಿಸಿ ಆರೋಗ್ಯದ ಅಧಿಪತಿಯಾದ ಧನ್ವಂತರಿಯ ಸ್ವಾಗತಕ್ಕಾಗಿ ಸಜ್ಜಾಗುತ್ತಾರೆ. ಅಂತೆಯೇ ಮುಸ್ಸಂಜೆಯ ವೇಳೆ ಅಕಾಲ ಮೃತ್ಯುವನ್ನು ಹೋಗಲಾಡಿಸಲು ಮನೆಯ ಮುಂದೆ ದೀಪವನ್ನು ಇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. 

                                                                                       

 ಧಾರ್ಮಿಕ ಗ್ರಂಥಗಳಲ್ಲಿ 'ದೀಪ ಹಚ್ಚುವ' ಬಗೆಗಿನ ಮಹತ್ವವನ್ನು ತಿಳಿಸಿದ್ದಾರೆ.

  ನಿಮಿಷಂ ನಿಮಿಷಾರ್ಧಂ ವಾ ಘೃತದೀಪಂ ನಿವೇದಯೇತ್ ಕಲ್ಪಕೋಟಿ ಸಹಸ್ರಾಣಿ ವಿಷ್ಣುಲೋಕೇ ಮಹೀಯತೇ -ಎಂದು

 ಒಂದು ನಿಮಿಷವಾಗಲಿ, ಅರ್ಧ ನಿಮಿಷವಾಗಲಿ ದೇವರಿಗೆ ಅರ್ಪಿಸಿದ ದೀಪ ಅನೇಕ ಕಲ್ಪಗಳವರೆಗೂ ವಿಷ್ಣುಲೋಕದಲ್ಲಿ ಮೆರೆಯಲು ಕಾರಣವಾಗುವುದು.


   ಮಾರನೆಯದಿನ ಚತುರ್ದಶಿ.ಅಧಿಕ್ರತವಾಗಿ ಪಟಾಕಿ ಹೊಡೆಯಬಹುದು ಆವತ್ತಿನಿಂದ. ಆಗೆಲ್ಲ ಮನೆಯೆದುರು ಅಂಗಳ ಇರುತ್ತಿತ್ತು. ಪಕ್ಕದ ಮನೆ ದೂರವಿರುತ್ತಿತ್ತು.ಹೂಕುಂಡವೋ ರಾಕೆಟ್ಟೋ ಏನೂ ಹಚ್ಚಿದರೂ ನಿರಾಂತಕ ನಿಂತು ಬೆಡಗು ಸವಿಯಬಹುದಿತ್ತು. ಈಗ ಯಾವ ಬಾಣ,ಯಾವ ಬಿರುಸು ಎಲ್ಲಿ ದಿಕ್ಕು ತಪ್ಪುವುದೋ, ಯಾರ ಕಣ್ಣಿಗೆ ಬೀಳುವುದೋ ಅನ್ನುವ ಕಾಳಜಿವಹಿಸಬೇಕು.  ಪ್ರತಿ ಹಬ್ಬಕ್ಕೂ ಇಂಥದ್ದೊಂದು ಸ್ನಾನ ಇರುತ್ತದೆ. ಯುಗಾದಿ, ಗೌರಿ, ಗಣೇಶ ಹಬ್ಬಕ್ಕೂ ತಪ್ಪಿದ್ದಲ್ಲ.  ದೀಪಾವಳಿಗೆ ಸ್ವಲ್ಪ ಡಿಫರೆಂಟ್ ಅನ್ನುವಂತೆ ಇರುತ್ತೆ. ಮುಖ್ಯವಾಗಿ ಮಕ್ಕಳಿಗೆ ಸಪ್ತ  ಚಿರಂಜೀವಿ ಸ್ನಾನ ಅಂತ ಮಾಡಿಸುತ್ತಾರೆ. ಆಂಜನೇಯ, ಪರುಶುರಾಮ ಸೇರಿ ಒಟ್ಟು  ಏಳು ಮಂದಿ ಈ ಪಟ್ಟಿಯಲ್ಲಿರುವ ಮಹಾಪುರುಷರು. ಅವರ ಶಕ್ತಿ-ಸಾಮರ್ಥ್ಯ  ಬರಲಿ ಎಂದು ಮಕ್ಕಳಿಗೆ ಏಳು ಕಡೆ ಎಣ್ಣೆ ಹಚ್ಚಿ ಈ ಸ್ನಾನ ಮಾಡಿಸಲಾಗುತ್ತದೆ. ಚತುರ್ದಶಿಯಂದು  ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಜನ ಸ್ನಾನ ಮಾಡಿ, ಹೊಸದಾಗಿ ಮದುವೆಯಾದ ಅಳಿಯ ಮತ್ತು ಅವನ ಬಂಧುಬಳಗವನ್ನು ಕರೆಸಿ ಸುಖ ಸಂತೋಷಪಡಿಸುವುದೂ ಪದ್ಧತಿಯಲ್ಲಿದೆ. ಅಭ್ಯಂಜನ ಸ್ನಾನದಿಂದ ನರಕಾಂತಕನಾದ ನಾರಾಯಣನಿಗೆ ಸಂತೋಷ ಉಂಟಾಗುತ್ತದೆ ಮತ್ತು ನರಕಭೀತಿ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಭ್ಯಂಜನಕ್ಕೆ ಉಪಯೋಗಿಸುವ ಎಣ್ಣೆ ಮತ್ತು ಪುಡಿಗಳಿಗೆ ವಿಶೇಷವಾದ ಶಕ್ತಿ ಇದ್ದು ನರ ದೌರ್ಬಲ್ಯವನ್ನು ತಡೆಗಟ್ಟುವುದು. ಅಂದು ಯಮಧರ್ಮರಾಜನಿಗೆ ಹದಿನಾಲ್ಕು ಹೆಸರುಗಳಿಂದ ತಿಲತರ್ಪಣವನ್ನು ಕೊಡುವ ವಿಧಿಯೂ ಇದೆ. ಅಂದು ಬೈಗಿನಲ್ಲೂ ಮತ್ತು ರಾತ್ರಿಯಲ್ಲಿಯೂ ಮಕ್ಕಳಾದಿಯಾಗಿ ದೊಡ್ಡವರೂ ಸೇರಿ ಪಟಾಕಿ, ಬಾಣ ಬಿರುಸುಗಳನ್ನು ಸುಟ್ಟು ನಲಿಯುವರು. ನರಕಪರಿಹಾರಕ್ಕೋಸ್ಕರವಾಗಿ ದೇವಾಲಯಗಳಲ್ಲಿ, ಮಠ, ಬೃಂದಾವನ ಮತ್ತು ಮನೆಗಳ ಅಂಗಳಗಳಲ್ಲಿ, ನದಿ, ಬಾವಿ ಮತ್ತು ಮುಖ್ಯ ಬೀದಿಗಳಲ್ಲಿಯೂ ನಾಲ್ಕು ಬತ್ತಿಗಳುಳ್ಳ ದೀಪಗಳನ್ನು ಹಚ್ಚಿಡುವರು.

                                                                                                                              ಚಿತ್ರ : ಅಂತರ್ಜಾಲ



     ಅಮಾವಾಸ್ಯೆ ದಿನವೇ ದೀಪಾವಳಿ. ಅಂದು ವರ್ಷದ ಅತ್ಯಂತ ಕಾರಿರುಳು ಇರುವ ದಿನ ಎಂದು ನಂಬಲಾಗಿದೆ. ಆ ದಿನ ಲಕ್ಷ್ಮೀಪೂಜೆಗೆ, ಅದರಲ್ಲೂ ಧನಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವ. ಆ ದಿನ ವ್ಯಾಪಾರಿಗಳು ಅಂಗಡಿಪೂಜೆ ಮಾಡಿ ಧನಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. ಕೆಲವೆಡೆ ಭಕ್ತರು ಧನಾಧಿಪತಿಯಾದ ಕುಬೇರನನ್ನು ಪೂಜಿಸಿ ಪೂಜಾಗೃಹದಲ್ಲಿ ಕುಬೇರಯಂತ್ರವನ್ನು ಸ್ಥಾಪಿಸುತ್ತಾರೆ. ಆದಿವಂದಿತ ಗಣಪನಿಗೆ ಪೂಜೆ ಸಲ್ಲಿಸಿದ ಮೇಲೆ ಕುಬೇರನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಕುಬೇರಯಂತ್ರ ಸ್ಥಾಪಿಸುವಾಗ ಜೇನು, ಬೆಲ್ಲ ಮತ್ತು ಒಣ ಖರ್ಜೂರವನ್ನು ಯಂತ್ರದ ಮುಂದಿರಿಸಿ ತುಪ್ಪದಿಂದ ದೀಪ ಹಚ್ಚುವುದು ಸಂಪ್ರದಾಯ. ಅಂಗಡಿಪೂಜೆಯಂದು ಪ್ಯಾಪಾರಿಗಳು ತಮ್ಮ ಅಂಗಡಿಯನ್ನು ಚೊಕ್ಕಗೊಳಿಸಿ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಉತ್ತರ ಭಾರತದಲ್ಲಿ ಮತ್ತು ಇತರೆಡೆಗಳಲ್ಲಿ ರಾತ್ರಿ ಪೂರ್ತಿ ಜಾಗರಣೆ ಮಾಡಿ ಸಂಪತ್ತಿನ ಒಡತಿ ಲಕ್ಷ್ಮಿಯನ್ನು ಪೂಜಿಸುವರು. ಲಕ್ಷ್ಮೀದೇವಿಯ ಜೊತೆಗೆ ಧನಾಧಿಪತಿಯಾದ ಕುಬೇರನನ್ನೂ ಆರಾಧಿಸುವ ವಾಡಿಕೆ ಇದೆ. ಪ್ರತಿ ಮನೆ ಮನೆಗಳಲ್ಲಿಯೂ ಅತಿ ಕಡಿಮೆ ಎಂದರೆ ಒಂದು ಗ್ರಾಮಿನಷ್ಟು ಚಿನ್ನ ಅಥವಾ ಬೆಳ್ಳಿಯನ್ನು ಕೊಳ್ಳುವುದೂ ವಾಡಿಕೆ. ಅಂದು ಅಕ್ಕ ಪಕ್ಕದ ಮನೆಯವರುಗಳಿಗೆ ಮತ್ತು ನೆಂಟರಿಷ್ಟರುಗಳಿಗೆ ಬಾಗಿನ ಕೊಡುವುದೂ ರೂಢಿಯಲ್ಲಿದೆ. ಕೆಲಸಗಾರರಿಗೆ ಮಾಲೀಕರು ಬೋನಸ್, ಉಡುಗೊರೆಗಳನ್ನು ನೀಡುತ್ತಾರೆ.

     ಕಜ್ಜಾಯವೇ ದೀಪಾವಳಿಯ ಮುಖ್ಯ ಮೆನು ಆಗಿರುವುದರಿಂದ ಅದಕ್ಕಾಗಿ ಹಿಂದಿನ ದಿನ ಅಕ್ಕಿ ನೆನೆ ಹಾಕಲಾಗುತ್ತೆ. ಮಹಿಳೆಯರು ಕಜ್ಜಾಯ ತಯಾರಿ ಮಾಡಬೇಕಾದರೆ ಅತಿ ಎಚ್ಚರವಹಿಸುತ್ತಾರೆ. ಮೊದಲ ದಿನ ನೆನೆ ಹಾಕಿದ ಅಕ್ಕಿಯನ್ನು ಮರುದಿನ ಕುಟ್ಟಿ ನುಣುಪಾದ ಹಿಟ್ಟಾಗಿ ಮಾಡುತ್ತಾರೆ. ಹಿಟ್ಟಿಗೆ ಹದವಾಗಿ ಪಾಕ  ಸಿದ್ದಪಡಿಸುವುದು ಅಂದರೆ ಒಂದು ಸವಾಲಿನ ಕೆಲಸವೆ. ಕೆಲ ಮನೆಗಳಲ್ಲಿ ಸಕ್ಕರೆ ಕಜ್ಜಾಯ ಮಾಡಿದರೆ, ಇನ್ನು ಕೆಲವರು ಬೆಲ್ಲದ ಕಜ್ಜಾಯ ಮಾಡುತ್ತಾರೆ. ಉಳಿದಂತೆ ಐದಾರು ರೀತಿಯ ಪಲ್ಯಗಳು, ಅನ್ನ, ರಸಂ, ಬಾಯಲ್ಲಿ ನೀರೂರಿಸುವ ಹುಳಿ ಇತ್ಯಾದಿಗಳನ್ನು ಸಿದ್ದಪಡಿಸುತ್ತಾರೆ.

      ಕಾರ್ತಿಕ ಶುದ್ಧ ಪ್ರಥಮಾ ತಿಥಿಯಂದು ಬಲಿಪಾಡ್ಯಮಿ. ಅಂದು ಸ್ವಾತಿ ನಕ್ಷತ್ರವಿದ್ದರೆ ಇನ್ನೂ ತುಂಬಾ ಶ್ರೇಷ್ಠವಾದ ದಿನ. ಅಂದಿನ ಮುಖ್ಯ ವಿಧಿಗಳಲ್ಲಿ ಬಲೀಂದ್ರ ಪೂಜೆಯೂ ಒಂದು. ಬಲೀಂದ್ರನ ಚಿತ್ರವನ್ನು ಐದು ಬಣ್ಣದ ಪುಡಿಗಳಿಂದ ರಚಿಸಬೇಕು ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಆತನೊಡನೆ ಆತನ ಪತ್ನಿ ವಿಂಧ್ಯಾವಳೀ ಮತ್ತು ಪರಿವಾರದ ರಾಕ್ಷಸರಾದ ಬಾಣ, ಕೂಷ್ಮಾಂಡ ಮತ್ತು ಮುರರನ್ನು ಚಿತ್ರಿಸಬೇಕು. ಬಲೀಂದ್ರನನ್ನು ಕರ್ಣಕುಂಡಲ, ಕಿರೀಟ ಮುಂತಾದ ಆಭರಣಗಳಿಂದ ಅಲಂಕಾರಗೊಳಿಸಬೇಕು. ಕಮಲದ ಹೂ, ಸುವರ್ಣ ಪುಷ್ಪ, ಗಂಧ, ಧೂಪ, ದೀಪ ಮತ್ತು ನೈವೇದ್ಯಗಳಿಂದ ಆತನನ್ನು ಪೂಜಿಸಬೇಕು. ಬಲಿ ಚಕ್ರವರ್ತಿಯ ನೆನಪಿನಲ್ಲಿ ದಾನವನ್ನು ಮಾಡುವುದರಿಂದ ದಾನವು ಅಕ್ಷಯವಾಗುವುದು ಮತ್ತು ನಾರಾಯಣನು ಪ್ರಸನ್ನನಾಗುವನು ಎಂಬ ಪ್ರತೀತಿ ಇದೆ. ಅಂದು ಹಸುಗಳಿಗೆ ಮತ್ತು ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿಯನ್ನು ಕೊಡಬೇಕು. ಅವುಗಳಿಗೆ ಸ್ನಾನ ಮಾಡಿಸಿ ಅಲಂಕರಿಸಿ, ಒಳ್ಳೆಯ ಆಹಾರವನ್ನು ಕೊಟ್ಟು ಪೂಜಿಸಬೇಕು. ಗೋವರ್ಧನ ಪರ್ವತವನ್ನು ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಪೂಜಿಸಬೇಕು. ಗೋವರ್ಧನ ಗಿರಿಗೆ ಹೋಗಲಾಗದವರು ಆ ಪರ್ವತದ ಚಿತ್ರವನ್ನು ರಚಿಸಿ ಪೂಜಿಸಬೇಕು.

     ಕಾರ್ತಿಕ ಶುದ್ಧ ದ್ವಿತೀಯಾ ತಿಥಿಯಂದು ಉತ್ತರ ಭಾರತದಲ್ಲಿ ಭಾವು ದೂಜ್ ಎಂದೂ, ಮಹಾರಾಷ್ಟ್ರದಲ್ಲಿ ಭಾವುಬೀದ್ ಎಂದೂ, ಇತರೆ ಕಡೆಗಳಲ್ಲಿ, ಭ್ರಾತೃದ್ವಿತೀಯಾ, ಯಮದ್ವಿತೀಯಾ, ಭಗಿನೀದ್ವಿತೀಯಾ ಅಥವಾ ಸೋದರಿ ಬಿದಿಗೆ ಎಂದು ಹಬ್ಬವನ್ನಾಚರಿಸುವರು. ಆ ದಿನದಂದು ಯಮಧರ್ಮರಾಜನು ತನ್ನ ಸೋದರಿಯಾದ ಯಮುನಾದೇವಿಯ ಮನೆಗೆ ತೆರಳಿ ಆಕೆಯ ಆತಿಥ್ಯವನ್ನು ಗೌರವಿಸಿದನೆಂದು ಪ್ರತೀತಿ ಇದೆ. ಅಂದು ಮಧ್ಯಾಹ್ನ ಪುರುಷರು ತಮ್ಮ ಮನೆಗಳಲ್ಲಿ ಊಟ ಮಾಡದೇ, ಸೋದರಿಯ ಮನೆಗೆ ಔತಣಕ್ಕೆ ಹೋಗಬೇಕು. ಆಕೆಗೆ ಯಥಾಶಕ್ತಿ ಉಡುಗೊರೆಯನ್ನು ಇತ್ತು ಗೌರವಿಸಬೇಕು. ಅಂದು ಯಮನಿಗೂ, ಯಮುನಾದೇವಿಗೂ ಮತ್ತು ಚಿತ್ರಗುಪ್ತನಿಗೂ ಅರ್ಘ್ಯವನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಬೇಕು. ಅಲ್ಲದೇ ಚಿರಂಜೀವಿಗಳಾದ ಮಾರ್ಕಂಡೇಯ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ ಮತ್ತು ಅಶ್ವತ್ಥಾಮ ಇವರುಗಳಿಗೆ ಪೂಜೆ ಸಲ್ಲಿಸಬೇಕು.

ನನ್ನ ಸೊಸೆ ತ್ರಿಶ

'ತುಳುವಾಲ ಬಲಿಯೇಂದ್ರ'
  ಓ... ಬಲೀಂದ್ರ ಮೂಜಿ ದಿನತ ಬಲಿಗೆತೊಂದು ಪೋಲಿ ಕೊರ್ಲ ಕೂ... ಆ ಊರುದ ಬಾಲಿ ಕೊನೊಪೋಲ... ಇದು ತುಳು ನಾಡಿನ ದೀಪಾವಳಿಯಲ್ಲಿ ಬಲೀಂದ್ರನನ್ನು ಕರೆಯುವ  ಸಂಭ್ರಮದ ಕ್ಷಣ. ತುಳುನಾಡಿನ ಮನೆ  ಮನಗಳಲ್ಲಿ ಬಲಿಯೇಂದ್ರ ಪರಮ ಪೂಜ್ಯ ಸ್ಥಾನವನ್ನು ಪಡೆದಿದ್ದಾನೆ. ತುಳುನಾಡಿನ ಪಾಡ್ದನದ ಪ್ರಕಾರ ಆತ 'ತುಳುವಾಲ ಬಲಿಯೇಂದ್ರ'. ಈ ನಾಡಿನ  ಪ್ರಾಚೀನ ದೊರೆ. ಆತನ ಜನಪ್ರಿಯ ಆಳ್ವಿಕೆಯ ವೈಖರಿಗೆ ಬೆಚ್ಚಿದ ನಾರಾಯಣ ದೇವರು ಮಾರುವೇಷದಿಂದ ತುಳುನಾಡು ನೋಡುವುದಕ್ಕೆ, ತುಳು ಭಾಷೆ ಕಲಿಯುವುದಕ್ಕೆ ಬಂದೆನೆಂದು ಹೇಳುತ್ತಾ ಜಾಣ್ಮೆಯಿಂದ ಆತನ ಸರ್ವ ಸಂಪತ್ತನ್ನೂ ಸ್ವಾಧೀನಪಡಿಸಿಕೊಂಡು ಭೂಲೋಕದಿಂದ ಆಚೆಗೆ ಕರೆದೊಯ್ದಿದ್ದಾನೆ. ಆದರೆ ಬಲಿಯೇಂದ್ರನ ಪ್ರಜಾಪ್ರೀತಿಗೆ ಕರಗಿದ ನಾರಾಯಣ ದೇವರು ಆತನದಾಗಿದ್ದ ಭೂಲೋಕದಲ್ಲಿ ಆತ ದೀಪಾವಳಿಯ ಮೂರು ದಿನ ಇದ್ದು ಹೋಗಲು ಅವಕಾಶ ನೀಡುತ್ತಾನೆ. ಕೃಷಿಯ ಮೇಲಿನ ಅಭಿಮಾನ, ಸಮೃದ್ಧ ಫಸಲಿನ ನಿರೀಕ್ಷೆ, ಭೂಮಿ ಮೇಲಿನ ಪ್ರೀತಿ, ಬಲಿಯೇಂದ್ರನ ಕುರಿತ ಭಕ್ತಿ- ಎಲ್ಲವುಗಳನ್ನು ಆವಾಹಿಸಿಕೊಂಡ ತುಳುವರು ದೀಪಾವಳಿಯ ಮೂರು ದಿನ ಬಲಿಯೇಂದ್ರನ ಆರಾಧನೆಯಲ್ಲಿ ಮೈಮರೆಯುತ್ತಾರೆ.

    ದೀಪಾವಳಿಯ ಅಬ್ಬರ ಮುಗಿದ ನಂತರದ ಹದಿನೈದನೇ ದಿನ ಅಂದರೆ ಹುಣ್ಣಿಮೆಯ ದಿನದಂದು ಆಚರಿಸುವ ಹಬ್ಬವೇ ತುಳಸೀ ವಿವಾಹ ಅಥವಾ ತುಳಸೀ ಪೂಜೆ. ದೇವಿ ಮಹಾಲಕ್ಷ್ಮಿಯು 'ವೃಂದಾ 'ಎಂದು ತುಳಸಿಯ ರೂಪದಲ್ಲಿ ಜನಿಸಿ ಭಕ್ತರನ್ನು ರಕ್ಷಿಸುತ್ತಾಳೆ ಎಂಬ ವಿಶ್ವಾಸದಿಂದ ತುಳಸೀ ಪೂಜೆಯನ್ನು ಮಾಡಲಾಗುತ್ತದೆ. ಅಂದು ಮನೆಯ ಮುಂದಿರುವ ತುಳಸೀಗಿಡವನ್ನು ಕಬ್ಬಿನ ಬೇಲಿ ಕಟ್ಟಿ ಹುಣಸೆ ಮತ್ತು ನೆಲ್ಲಿಕಾಯಿ ಮರದ ರೆಂಬೆಗಳಂದ ಶೃಂಗರಿಸಿ ಸಂಜೆಯ ವೇಳೆ ಪೂಜೆ ಮಾಡಲಾಗುತ್ತದೆ. ಕಬ್ಬು ಮಿಶ್ರಿತ ಅವಲಕ್ಕಿ ಬೆಲ್ಲದ ಪ್ರಸಾದವನ್ನು ವಿತರಿಸಿ ತುಳಸೀ ಪೂಜೆಯನ್ನು ಮುಕ್ತಾಯಗೊಳಿಸುತ್ತಾರೆ. ಇದರೊಂದಿಗೆ ದೀಪಾವಳಿಯ ಆಚರಣೆಯು ಕೊನೆಗೊಳ್ಳುತ್ತದೆ.

    ರಾಮಾಯಣದಲ್ಲಿ ಮೇಘನಾಥನು (ಇಂದ್ರಜಿತು) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವ  ನಮ್ಮ ಪಾಪಗಳನ್ನು ಹೋಗಲಾಡಿಸಲಿ.

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

8 ಕಾಮೆಂಟ್‌ಗಳು:

  1. ಸುಂದರವಾದ ವಿವರಣೆ . ದೀಪಾವಳಿಯ ಶುಭಾಶಯಗಳು

    ಪ್ರತ್ಯುತ್ತರಅಳಿಸಿ
  2. ವಿಶೇಷ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
    ದೀಪಾವಳಿಯ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  3. ಸುಂದರ ಬರಹ.ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. :-)

    ಪ್ರತ್ಯುತ್ತರಅಳಿಸಿ
  4. ಸುನಾತ್, ಸ್ವರ್ಣ, ಕೃಷ್ಣಮೂರ್ತಿ ಸರ್, ಹಾಗೂ ಗುರುರಾಜ್ ರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  5. ಧನ್ಯವಾದ ಮಾಲತಿ ಅಕ್ಕ ಮತ್ತು ಗೆಳೆಯ ಚೆನ್ನಬಸವರಾಜ್ ರವರಿಗೆ. ನಿಮಗೆ ದೀಪಾವಳಿಯ ಹಾರ್ದಿಕ ಸುಭಾಶಯಗಳು.

    ಪ್ರತ್ಯುತ್ತರಅಳಿಸಿ