ಚಿತ್ರ : ಅಂತರ್ಜಾಲ |
ಮಕರಂದ ಪಾನ ಮಾಡಿ ಜೊತೆ ಜೊತೆಯಾಗಿ
ಝೇಂಕಾರ ಮಾಡುತ್ತಾ ನಳನಲಿಯುತ್ತಿರುವ ದುಂಬಿಗಳೇ...
ನೀವಾದರೂ ಹೇಳಬಲ್ಲಿರಾ ಕಾರಣ
ನಾ ಯಾಕೆ ಸಾಹಿತ್ಯಿಕ ವರ್ತುಲದಿಂದ ಹೊರಹೋಗಿದ್ದೆನೆಂದು,
ಬರೆಯುದ ಮರೆತು ಬಿಟ್ಟಿದ್ದೆನೆಂದು.
ಮಿಣುಕುವ ಮಿಂಚುಹುಳುಗಳಿದ್ದರೆ ಸಾಕೆ 'ದೀವಿಟಿಕೆ'ಯಂತೆ
ಸ್ಪೂರ್ತಿಯ ತುಂಬಲು ?
ಚಿಂತೆ ಇಲ್ಲದೆ ನಿದ್ದೆ ಹೋಗಿರುವ ಇಬ್ಬನಿಯೇ... ಹೇಳುವೆಯಾ ?
ನಾ ಯಾಕೆ ಬರೆಯಬೇಕೆಂಬ ಮನಸ್ಸ ಚೆಲ್ಲಿ
ಹರಿಯಬಿಡಲಿಲ್ಲವೆಂದು,
ಕವಿತೆಗಳ ಗೀಚಬಲ್ಲೆನೆಂಬ ಧೈರ್ಯ ಹೇಗೆ
ಎಲೆಮರೆಯಲ್ಲಿ ಅಡಗಿರುವ ಮಳೆ ಹನಿಯಾಯಿತೆಂದು.
ಗಿಳಿಗಳ ಭಯದಿಂದ ಭೂಮಿಗೆ ಇಳಿದು ಹೋಗ ಬೇಡಿ ಭತ್ತದ ತೆನೆಗೆಳೇ...
ಅಲ್ಲೇ ನೀರಿನಲ್ಲಿ ನಿಲ್ಲಿ. ಒಮ್ಮೆ ಆಲಿಸಿ
ಶಬ್ಧಗಳಿಂದ ಶಬ್ಧಗಳನ್ನು ಸೇರಿಸಿ
ಕವನಗಳನ್ನು ಕಟ್ಟಲಿಲ್ಲವಲ್ಲಾ ಎಂಬ ಕೊರಗನ್ನು
ಕಲ್ಪನೆ ಮೂಡಲಿಲ್ಲವಲ್ಲಾ ಎಂಬ ನನ್ನ ವ್ಯಥೆಯನ್ನು
ಬರೆಯಲು ಸಾಧ್ಯವಾಗದ ನನ್ನ ಸಾವಿರ ನೆಪಗಳನ್ನು
ಉರಿಯುವ ಸಾವಿರ ಸಣ್ಣ ಹಣತೆಗಳು
ಸೂರ್ಯನ ಬೆಳಕಿನಂತೆ ಸ್ಫೂರ್ತಿಯ ತುಂಬ ಬಲ್ಲುದೇ ?
ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದ
ಎಳೆ ಗಿಳಿಗಳೇ... ಹೇಳಿ
ಇಂದು ನನ್ನಿಂದ ಕವಿತೆ ಹುಟ್ಟಲು ಕಾರಣವೇನೆಂದು
ಅಕ್ಷರಗಳಿಂದ ಅಕ್ಷರಗಳ ಪೋಣಿಸಲು ಬಂದ ಸ್ಫೂರ್ತಿ ಹೇಗೆಂದು.
ಸಾವಿರ ನಕ್ಷತ್ರಗಳಿದ್ದರೂ ಚಂದ್ರನೇ ಬೇಕು ತಾನೆ ಬೆಳದಿಂಗಳ ಚೆಲ್ಲಲು
ಧೂಳು ಹಿಡಿದ ರಟ್ಟಿನ ಹೊತ್ತಗೆಯ
ತಟ್ಟಿ ತೆಗೆದು, ಕಳೆದು ಹೋದ ನೆನಪುಗಳ
ಸಾಗರದಲ್ಲಿ ಮಿಂದೆದ್ದು,
ಮತ್ತೆ ಬರೆದೆ ನಾ
ಓದಿದ ಕೋಗಿಲೆಗೆ ಮತ್ತೆ ವಸಂತ...
ಮತ್ತೆ ಹಾಡಿತು ಕೋಗಿಲೆ.
ಕವಿಯ ಅಳಲನು ಪ್ರಕೃತಿಯೂ ಅರ್ಥ ಮಾಡಿಕೊಂಡಂತಿದೆ. ಒಳ್ಳೆಯ ಕವನ ರಚಿತವಾಗಿದೆ.
ಪ್ರತ್ಯುತ್ತರಅಳಿಸಿವಾಸ್ತವದ ಅಳಲು ....
ಪ್ರತ್ಯುತ್ತರಅಳಿಸಿಮನ ಮುಟ್ತು .
ಕವಿತನ ಅನಾವರಣಿಸಿದ್ದೀರಿ. ಅಭಿನಂದನೆ.
ಪ್ರತ್ಯುತ್ತರಅಳಿಸಿ